Tuesday, November 6, 2012

ಮೌನ

ಮೌನದ ನಡುವೆ ಮೌನದ ಕದನ
ಮೌನವಿಲ್ಲದ ಕಡೆ ಮೌನದ ತಪನ
ಮೌನದಿಂದ ಮೌನದ ಜನನ
ಮೌನವೆ, ನಿನಗೆ ಇದೋ ಮೌನದ ನಮನ

ಮೌನ ಬಂಧಿಸಬಲ್ಲದು  ಮಾತಿನ ಆಳ
ಮೌನಕೆ ತಿಳಿದಿದೆ ಶಾಂತಿಯ ಗಾಳ
ಮೌನ ಸಿಲುಕದು ಎಂದೂ ಕೋಪದ ಜಾಲ
ಮೌನ ಆವರಿಸಬಲ್ಲದು ಪ್ರತಿಯೊಂದು ಸ್ಥಳ!

ಮೌನ ನೀ ನಿರ್ಮಲ, ಮೌನ ನೀ ಶಾಂತ
ಮೌನದ ಒಲುಮೆ ಆಗಾಧ ಮತ್ತು ಅನಂತ
ಮೌನವಿರಬೇಕು ಜಗದ ಸುತ್ತಮುತ್ತ
ಮೌನ ಸೃಷ್ಟಿಸಿದೆ ಈ ಕವಿತೆಯ ವೃತ್ತ!

ಮೌನವಿರುವಾಗ ಮೌನದ ಭಯವೇಕೆ?
ಮೌನವಿರುವಾಗ ಮನದ ದಿಗಿಲೇಕೆ?
ಮೌನವಿಹುದು ಎತ್ತರ, ನಿರಂತರ
ಮೌನವೇ ಒಮ್ಮೊಮ್ಮೆ ಎಲ್ಲ ಪ್ರಶ್ನೆಯ ಉತ್ತರ!


Thursday, September 27, 2012

ಜೊತೆ ನೀ.....

ದನಿ ನನ್ನಾ ದನಿ, ಸಣ್ಣ ಕರೆಯ ಮಾಡಿದೆ ಇಲ್ಲಿ
ಹನಿ ಕಣ್ಣ ಹನಿ, ಜಿನುಗಿದೆ ನೋಡು ಈ ಕಣ್ಣಲಿ!!
ಆ ದನಿಯಲ್ಲಿಯೂ ಆ ಹನಿಯಲ್ಲಿಯೂ, ಈ ಮುಗ್ದತೆಯ ಹೇಗೆ ಕರಗಿಸಲಿ?

ನೀ ಇರಲು ಎದುರಲಿ, ನೆರಳಿನ ರೀತೀಲಿ.. ಜೀವಂತವಾದೆ ನಾ ಇಲ್ಲಿ...
ಗೆಲುವೆ ಇಲ್ಲದ ಸೋಲಲ್ಲಿಯೂ ನಾ ಗೆಲುವನ್ನೇ ಪಡೆದೆ ಅಲ್ಲಿ  ..
ದನಿ ನನ್ನಾ ದನಿ, ಸಣ್ಣ ಕರೆಯ ಮಾಡಿದೆ ಇಲ್ಲಿ......


ಜೊತೆಯೇ ಸೇರದ ರೈಲಿನ ಹಳಿಯಂತೆ.. ಜೊತೆ ಇಲ್ಲದೇ ಜೊತೆ ನೀ ಆದೆ...
ಬಣ್ಣ ಕಳೆದ ಮಳೆ ಬಿಲ್ಲಿಗೆ, ಬೆಳಕಿನ ಬಣ್ಣವ ನೀ ನೀಡಿದೆ,
ಬಿರುಗಾಳಿಯಲ್ಲಿ, ಬಂದೆ ನೀ ತಂಗಾಳಿಯ ಹಾಗೆ, ಬರುಡು ಭೂಮಿಗೆ ಮಳೆ ಹನಿಯ ಹಾಗೆ ನೀ ಬಂದೆ ...
ಕಾಣದ ಲೋಕದಿ, ಸ್ವರ್ಗವ ತಂದೆ ನೀ, ನನ್ನ ಜೀವನದ ಜೀವ ಬಿಂದು ನೀ........

ನೀ ಇರಲು ಎದುರಲಿ, ನೆರಳಿನ ರೀತೀಲಿ.. ಜೀವಂತವಾದೆ ನಾ ಇಲ್ಲಿ...
ಗೆಲುವೆ ಇಲ್ಲದ ಸೋಲಲ್ಲಿಯೂ ನಾ ಗೆಲುವನ್ನೇ ಪಡೆದೆ ನಾ ಅಲ್ಲಿ  ..


ದಾರ ಕಡಿದ ಗಾಳಿಪಟದಂತೆ, ಗುರಿ ಇಲ್ಲದೆ ಒಂಟಿಯಾಗಿದ್ದೆ,
ಜೀವವಿದ್ದರೂ ಇಲ್ಲದ ಹಾಗೆ ಮಾತನ್ನೇ ನಾ ಮರೆತಿದ್ದೆ...
ನೀನು ಬಂದಮೇಲೆ ನಾನು ಪದಗಳ ಒಡತಿಯಾದೆ, ಆ ಪದಗಳ ಬಂಧನದಿ ನಾನು ಈಗ ಕಳೆದುಹೋದೆ
ನಿನ್ನ ಈ ಒಲವಿಗೆ, ನಿನ್ನ ಈ ಪ್ರೀತಿಗೆ,ನಾ ಎನ್ನನ್ನು ನೀಡಲಿ?

ನೀ ಇರಲು ಎದುರಲಿ, ನೆರಳಿನ ರೀತೀಲಿ.. ಜೀವಂತವಾದೆ ನಾ ಇಲ್ಲಿ.......
ಗೆಲುವೆ ಇಲ್ಲದ ಸೋಲಲ್ಲಿಯೂ ನಾ ಗೆಲುವನ್ನೇ ಪಡೆದೆ ನಾ ಅಲ್ಲಿ  .. ..

ದನಿ ನನ್ನಾ ದನಿ, ಸಣ್ಣ ಕರೆಯ ಮಾಡಿದೆ ಇಲ್ಲಿ......

Monday, August 13, 2012

ಕಲೆಯ ಗುಡಿ - ಕವಿ ಮನೆ

       ದಟ್ಟ ಹಸಿರ ನಡುವೆ ತನ್ನ ವಿಶಾಲ ಆವರಣವ ಹೊಂದಿ ಪ್ರವಾಸಿಗರ, ಕನ್ನಡ ಅಭಿಮಾನಿಗಳ ತನ್ನತ್ತ ಬರಮಾಡಿಕೊಳ್ಳುತ್ತಿದ್ದ ಆ ತಾಣ, ಕಿರಿದಾದ ತಿರುವುಗಳ್ಳನ್ನು ಒಳಗೊಂಡು ಆ ಪರಿಸರವ ಸವಿಯುವ ಕುತೂಹಲ ಇಮ್ಮಡಿಯಾಗಿಸುತ್ತದೆ. ಅಲ್ಲಿ ಕಾಲಿಡುತ್ತಿದ್ದಂತೆ ಆ ಮನೆಯ ಸುಂದರ ಚಿತ್ರಣ ಮನ ಹಾಗೂ ಮೊಗವ ತಿಳಿಯಾಗಿಸುತ್ತದೆ, ಆ ಕವಿಗೆ ಕವಿತೆಗೆ ಸ್ಪೂರ್ತಿಯೇನೆಂಬೂದರ ಅರಿವಾಗುತ್ತದೆ.


       ಎತ್ತರ ಬೆಳೆದ ಅಡಿಕೆ ತೋಟಗಳು, ಹಸಿರಿನ ರಂಗನ್ನು ಎಲ್ಲೆಡೆ ಪಸರಿಸಿದ್ದ ಭೂಮಿತಾಯಿ, ಪ್ರಶಾಂತವಾಗಿರುವ ಆ ನೆಲ ನಿಮ್ಮನ್ನು ಭಾವನ ಲೋಕಕ್ಕೆ ಕರೆದೊಯ್ಯುತ್ತದೆ. ಆ ಕವಿಯ ಜನ್ಮ ಸ್ಥಳ "ಕುಪ್ಪಳಿ", ಆ ಸ್ಥಳ ಕವಿಯ ಕಾವ್ಯಗಳ ಕನ್ನಡಿ. ಇದು ನಮ್ಮ ರಾಷ್ಟ್ರ ಕವಿ ಕುವೆಂಪುರವರ ಪಾರಂಪರಿಕ ಒಟ್ಟು ಕುಟುಂಬದ ಬಾಂಧವ್ಯವ ಸಾರುವ ಮನೆ.

       ಕುಪ್ಪಳಿ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆಯಲ್ಲಿದೆ, ಕೊಪ್ಪ ಇಂದ ಕುಪ್ಪಳಿ ತಲುಪುವ ಮಾರ್ಗ ಮಲೆನಾಡಿನ ನಿಸರ್ಗವ ಬಣ್ಣಿಸುವುದು. ಮೊದಲಿಗೆ ಹಾದಿಯಲ್ಲಿ ಕವಿಶೈಲ, ಅಲ್ಲಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನದ ಮನದ ದುಗುಡಗಳ ತೊರೆಯಬಲ್ಲ ನಿರ್ಮಲ ಶಾಂತಿಯ ಮೈದುಂಬಿಸಿಕೊಳ್ಳಬಲ್ಲನು. ಕವಿಯ ಪ್ರತಿ ಹೆಜ್ಜೆಯ ಕವಿತೆಯ ಸ್ಪರ್ಶ ಅಲ್ಲಿ ಸಿಗುತ್ತದೆ.

ಕವಿ ಶೈಲ
"ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು 
ಕಲಾವಂತನಿಗೆ ಅದು ಸಗ್ಗ ವೀಡು "
- ಕುವೆಂಪು 
        
       ಈ ಮೇಲಿನ ಎಲ್ಲಾ ಪದಗಳು ಅಕ್ಷರಃ ಸಹ ಸತ್ಯ. ತನ್ನ ಒಡಲಲ್ಲಿ ಆಪಾರ ಸೌಂದರ್ಯವ ಅಡಗಿಸಿಕೊಂಡು ಎಲ್ಲರನು ತನ್ನಲ್ಲಿ ಮಂತ್ರಮಗ್ದವಾಗಿಸಬಲ್ಲದು. ಒಮ್ಮೆ ಯಾರೇ ಅಲ್ಲಿ ಬಂದರು ಆ ಒಲವಲ್ಲಿ, ಪ್ರಕೃತಿಯಲ್ಲಿ ಕಳೆದು ಹೋಗುವುದು ಸತ್ಯ. ಕವಿಗೆ ಬಹಳ ಹತ್ತಿರವಾದ ಈ ಕವಿಶೈಲ ಆವರ ಎಷ್ಟೋ ಕವನ ಕಾದಂಬರಿಗಳ ಹುಟ್ಟು ಹಾಕಿದ ಮಾತೃ ಸ್ವರೂಪಿ.

    ಕವಿ ಆರಾಧಿಸುವ ಆ ಕವಿಶೈಲದಲ್ಲಿ ಅವರ ಸಮಾಧಿ ಹಾಗೂ ಧ್ಯಾನ ಪೀಠ ಇದೆ, ಕನ್ನಡವ ಉನ್ನತ ಪ್ರಗತಿಗೆ ಕರೆದೊಯ್ದ ಕವಿಯ ಆರಾಧನಾ ಸ್ಥಳಕ್ಕೆ ಒಮ್ಮೆ ಭೇಟಿ ಕೊಡಿ. 

   ಅಲ್ಲೇ ಸಮೀಪದಲ್ಲಿ ಕವಿಯ ಮನೆ ಇದೆ, ಅವರ ಬಾಲ್ಯದ ನೆನಪುಗಳಿಂದ ಅವರ ಕೊನೆಯ ದಿನಗಳವರೆಗಿನ ಎಲ್ಲಾ ವಿವರಗಳು ಅಲ್ಲಿ ತಿಳಿಯಬಹುದು. ಆವರ ಮನೆಯ ಪ್ರತಿ ಹೆಜ್ಜೆಯಲ್ಲೂ ಕನ್ನಡದ ಸಂಸ್ಕೃತಿಯ, ಮಲೆನಾಡ ಸೊಗಡ ಸವಿಯಬಹುದು. ಅಲ್ಲಿಯೇ ಕುವೆಂಪುರವರ ಪುಸ್ತಕಗಳ ಮಾರಾಟ ಅಂಗಡಿ ಇದೆ, ಸ್ವಲ್ಪ ರಿಯಾಯಿತಿ ದರದಲ್ಲಿ ಪುಸ್ತಕಗಳ ಕೊಳ್ಳಬಹುದು.

 "ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!" 
- ಕುವೆಂಪು 
   ಕನ್ನಡದ ಅಭಿಮಾನವ ಎತ್ತಿ ಸಾರುವ ಈ ಗುಡಿ ನಿಜಕ್ಕೂ ಕಲೆಯ ಸೆಲೆ, ನವ್ಯ ಕವಿಗಳಿಗೆ  ಸೂರ್ಯ ರಶ್ಮಿ ಈ ನಾಡು. ಇಲ್ಲಿನ ಕವನ ಸಂಸ್ಕೃತಿಯ ಸಮರಸವ ಎತ್ತಿ ಹಿಡಿದು, ಕಾವ್ಯ ದೀಪವ ಬೆಳಗಿ ಕನ್ನಡದ ಉನ್ನತಿಯ ಅರಿವು ಮೂಡಿಸಬೇಕಿದೆ.

 
 



Monday, July 30, 2012

ಕವನ

ಮೆಲ್ಲನೆ ಮೂಡಿದ ಅವಿರತ ಕದನ
ಕಿರಿದಾದ ಮನದ ಕೋಟೆಯಲಿ ಆವರಿಸಿದ ಮೌನ
ಸಪ್ಪಳವ ಇಂಗಿಸಲು ಹೃದಯದ ತಪನ
ಬೆರಗಾಗಿ ನೋಡುತಿದೆ ನನ್ನನು ಈ ಜೀವನ!

ಮುಗ್ದ ಒಲವಲಿ ಆಕ್ರೋಶವೇಕೇ?
ಹಿಡಿದಿಡುತ ನಿನ್ನನು ನೀ ಬಂಧಿಸಬೇಕೆ?
ತಿಳಿಯಬೇಕಿದೆ ಈಗ ಮನದ ಆಂತರ್ಯ
ಸ್ಪರ್ಶಿಸುವಾಸೆ ಈ ಜೀವನದ ಸೌಂದರ್ಯ

ಮುಸುಕಿನ ಒಳಗಡೆ ಸೃಷ್ಟಿಯ ಕನಸು
ಸರಿ ಸಮವಲ್ಲ ಇದು ಬಂಧನದ ಸೊಗಸು
ಆಗಸದ ಎಡೆಗೆ ಏರಬೇಕು ಮಾಡು ಇದನು ನನಸು
ತೃಪ್ತಿ ಇರದು ಹಾಗಾದರೂ ಇದು ಮುಗ್ಹ ಮನಸು?

ಮೂಡಿ ಬರುವ ಮಧುರ ಆಲಾಪನೆ,
ನೀಗದೇಕೆ ಜೀವನದ ಸಣ್ಣ ಸಣ್ಣ ಆಕ್ಷೇಪಣೆ?
ಕಲ್ಮಶ ಪರಿಶುದ್ದತೆಯ ವಿಶ್ಲೇಷಣೆ
ಸುಪ್ತ ಭಾವನಾ ಲಹರಿಗೆ ಸಿಗಲು ಮನ್ನಣೆ 

Monday, July 23, 2012

ಕರೆ

ಕನಸಿನ ಜೊತೆಯಲಿ ನೆನಪಿನ ಮಡಿಲಲಿ
ಒಲವಿನ ಮಳೆ ಹನಿಯು ಸುರಿದಿದೆ
ಕೇವಲ ಉಸಿರಲಿ ಹಾಡುವ ಹಾಡಲಿ
ನೆನೆದು ನಿನ್ನನ್ನು ಜೊತೆ ಕರೆಯುವೆ !!

ಮನಸಿನ ಮೂಲೇಲಿ ಕೂಡಿಟ್ಟ ಪದದಲಿ
ಕವಿತೆಯ ಕೊರಳಲಿ, ನಿನ್ನ ದನಿಯು ಸೇರಲಿ,
ಸಾವಿರ ಸ್ವರದಲಿ, ಬರೆಯುವ ಹೆಸರಲಿ,
ನೆನೆದು ನಿನ್ನನ್ನು ಜೊತೆ ಕರೆಯುವೆ !!

ನೋಡುವ ಲೋಕದಿ, ಕಂಡ ಈ ನೋಟದಿ
ಭಾವನೆಯ ಸುಳಿಯಲಿ, ಮೂಡುವ ಗುಳಿಯಲಿ
ಸುಳಿಯುವ ಗಾಳಿಲಿ, ಬಣ್ಣಗಳ ಹರಡಿದ ಬಾಳಲಿ
ನೆನೆದು ನಿನ್ನನ್ನು ಜೊತೆ ಕರೆಯುವೆ !!

ನಡೆಯುವ ಹಾದಿಲಿ, ನೀಡಿದ ಆಣೆಲಿ,
ಪಯಣದ ಜೊತೆಯಲಿ, ನುಡಿದ ಪದದಲಿ,
ಕೂಗುವ ಹೆಸರಲಿ, ಹೆಜ್ಜೆಯ ಸದ್ದಲಿ
ನೆನೆದು ನಿನ್ನನ್ನು ಜೊತೆ ಕರೆಯುವೆ !!



 

Friday, June 22, 2012

ಹಸಿವು

ಹಸಿವು, ಹಸಿವೆಂದರೆ ನೋವು
ಹಸಿವೆಂದರೆ ರೋಧನ
ಆಲಾಪನೆ ಮಾಡದು ಹೊಟ್ಟೆ, ಆದರೂ ರಾಗದಿ ಬೆರೆತ ಸ್ವರ
ಹಹಹ!!! ನಗುವಿರೇಕೆ ನೀವು, ತಿಳಿದೀತೇ ನಿಮಗೆ ಅದರ ದುಃಖ

ದೇಹವು ದಣಿವುದೇಕೆ? ಆಹಾರದ ಬಯಕೆ ಏಕೆ?
ಪ್ರಕೃತಿ ನಿಯಮ ಇದು! ಬೇಡವೆಂದು ಜರಿದರು ಬಿಡುವುದುಂಟೆ ?
ಒಂದು ದಿನದ ಒಂದು ಸರದಿಯ ಮರೆತರೂ
ಇಷ್ಟೊಂದು  ಸುಡುವುದು ಒಳಗೆ ತಾನೇಕೆ?

ಕೋಪ ರೋಷದ ಕಿಚ್ಹ ಹೊರದೂಡುವುದು
ಮನದಲಿ ನಿರೀಕ್ಷಣೆಯ ದೀಪ ಹಚ್ಚುವುದು
ಕೊನೆಯ ತುದಿಯ ಸೇರಿ ಹೊಸ ಆಲೋಚನೆ ಹುಟ್ಟಿಸುವುದು
ಕಣ್ಣಲ್ಲಿ ಇಲ್ಲದ ಕನಸ ಹುಟ್ಟಿಸುವುದು!!


ಹಸಿವು, ಹಸಿವೆಂದರೆ ನೋವು
ಹಸಿವೆಂದರೆ ರೋಧನ

Monday, June 18, 2012

ದೂರ

ಏಕಾಂತವಾಗಿದೆ ಏಕೆ ಈ ಜಾಗಃ ಇಲ್ಲಿ ..... ನೀನು ಇಲ್ಲದೆ, ನನ್ನ ನೋಡದೆ
ಕತ್ತಲು ತುಂಬಿದೆ ನೋಡು ನೀನು ಇಣುಕದೆ ...... ಕನಸುಗಳು ಬೀಳದೆ
ನಾಲ್ಕು ಹೆಜ್ಜೆಯೂ ದೂರ ಎನಿಸಿದೆ...ನೀನು ಜೊತೆ ಬರದೇ...

ಕಾಣೆಯಾದೆ  ನಾನು ಈಗ ನೋಡು ನಿನ್ನದೇ ನೆನಪಿನಲ್ಲಿ
ಸುತ್ತುತಿಹುದು ನಿನ್ನ ನೆರಳು ದೂರ ಇದ್ದರು ನೀ ಅಲ್ಲಿ
ನಾನು ಕಳೆದು ಹೋಗುತಿರುವೆ ನೋಡು ನಿನ್ನದೇ ಧ್ಯಾನದಲ್ಲಿ
ಹೇಗೆ ಹೇಳಲಿ ಈ ತಳಮಳವ ಇಂದು ನಾನು ನಿನ್ನಲ್ಲಿ

ಹ್ರೀ ಎಂಬ ಜೇಂಕಾರ ನಿನ್ನ ಒಮ್ಮೆ ನೋಡಿದರೆ ಮೂಡಬಹುದೇನೋ
ನಿನ್ನಲ್ಲಿ ನಾನು ಸೇರಿ ಹೊಸ ರಾಗವನ್ನು  ಹಾಡಾಬೇಕಿನ್ನು !!

 ಬೆಳಗ್ಗೆ ಎದ್ದು ನೋಡಿದರೆ ಇಲ್ಲಿ ನಿನ್ನ ಉಪಸ್ಥಿತಿಯೇ ಇಲ್ಲ
ಮುತ್ತನಿಟ್ಟು  ನನ್ನ ತಬ್ಬಿಕೊಳ್ಳುವ ಕೈಗಳಿಗ ಮರೆಯಾಯಿತಲ್ಲಾ
ನಾನು ಸಿಂಗರಿಸಿಕೊಂಡರೂ  ನೋಡುವ ಕಣ್ಣು ಇಲ್ಲಿಲ್ಲಾ
ನಿನಗಾಗಿ ನಾ ಈಗ ಕಾಫಿ ಮಾಡಬೇಕಿಲ್ಲ

ಏಕೆ ಹೀಗೇಕೆ ನಮ್ಮ ನಡುವೆ ಬಂಧನ?
ನೀ ಇಲ್ಲಿ ನಾ ಅಲ್ಲಿ ಭೂಮಿ ಎರಡಂತೆ ಆಯಿತೀಗ!!
ನಿನ್ನ ನೆನಪಿನಲೇ ಈಗ ನನ್ನ ಸಮಯದ ಹೋರಾಟ
ಉಡುಗೊರೆಯ ನೀಡಿದೆ ನೀನು ನನಗೆ ಸಂಯಮದ ತೋಟ !!

Tuesday, June 12, 2012

ಕವಿ ಮನೆ


ಅದೊಂದು ಸುಂದರ ತಾಣ, ಅಲ್ಲಿ ಮೂಡಿತ್ತು ಮಧುರ ಗಾನ
ಕುಪ್ಪಳಿಸುತ್ತ ಅಲ್ಲಿಗೆ ತೆರೆಳ ಬೇಕಂತೆ, ಅದು ಆ ಜಾಗದ ಮಹತ್ತಂತೆ
ಮೋಡ ಬೆಟ್ಟಗಳ ಚುಂಬಿಸುವ ಜಾಗ, ಕಡಿಮೆಯಾದಿತು ನಾನು ಕರೆದರೆ ಅದನ್ನು ಸ್ವರ್ಗ
ಹಸಿರಿನ ಬನದ ಅಂಶ ಆ ಬನ, ಅಲ್ಲಿ ಮಹಾ ಕವಿಯ ಜನನ!

ಕೈಲಾಸ ಅದು ಕವಿತೆಗೆ ಸ್ಫೂರ್ತಿ, ಆ ಕವಿ ಸಾಧಿಸಿದ್ದು ಮಹಾನ್ ಕೀರ್ತಿ
ಈ ಶಿಖರ ಕವಿಗೆ ಅಚ್ಚುಮೆಚ್ಚು, ಅಲ್ಲಿ ಮುದ್ರಣವಾಗುತ್ತಿತ್ತು ಕವಿ ಬರವಣಿಗೆಯ ಅಚ್ಚು
ಗುಂಗುರು ಕೂದಲಿನ ಕವಿಗೆ ಆ ಕವಿತೆಗಳೇ ಜೀವಾಳ
ಇದನೆಲ್ಲಾ ಬಣ್ಣಿಸುತಿದೆ ಕವಿ ಶೈಲ

ಪ್ರದಕ್ಷಿಣೆ ಮಾಡಿದೆ ಕಣ್ಣೋತ್ತಿ ನಡೆದೇ ಆ ಕವಿಯ ಮನೆಗೆ,
ಜೀವಂತವಾಗಿ ಕಂಡರು ಆ ಕವನಗಳಲ್ಲಿ ನನಗೆ
ಮನೆಯಲ್ಲ ಅದು ಕವಿಯ ಕಾವ್ಯ ತಾಜಮಹಲು
ಮನದಲ್ಲಿ ಮುಡಿಸೂತ  ಕವನದ ಅಲೆಯ ಕಡಲು

ನನ್ನ ಹೃದಯ ಪೂರ್ವಕ ವಂದನೆಗಳು ನಿಮಗೆ
ಈ ಕವನ ರಾಷ್ಟ್ರ ಕವಿಯ ಪಾದಾರವಿಂದಗಳಿಗೆ
ಹರಸಿ ನಮ್ಮನು ಈ ಸಾಹಿತ್ಯವ ಬೆಳೆಸಲು
ಕನ್ನಡತಿಯ ಋಣ ತೀರಿಸಲು

Wednesday, June 6, 2012

ಒಲವು

ಮನದಾಳದ ಭಾವನೆಗೆ ನಾ ಪ್ರೀತಿಯ ಬಂಧಿಸಲೇ?
ಈ ಸ್ನೇಹ ಪಯಣದಲಿ ಜೊತೆಯೊಂದ ನಾ ಬೇಡಲೇ?
ಈ ಜೀವದ ಚಡಪಡಿಕೆ ನಾ ಹೇಗ್ ಹೇಳಲಿ?
ನೀ ಆಲಿಸು ಹೃದಯದ ಈ ಚಳುವಳಿ!!!

ಕಣ್ಣಲ್ಲಿ ಬಚ್ಚಿಟ್ಟ ಮಾತೊಂದ ನೀ ಅರಿತೆ
ಹೇಳದೆ ಕೇಳದೆ ಹೇಗೆ ನಾ ಮನಸೋತೆ?
ಒಲವಿನ ಸುತ್ತ ಹೆಣೆದ ಬೇಲಿಯ ಸುಳಿಯಲ್ಲಿ
ಮನಸಾರೆ ಆಲಿಸಿದೆ ನಾ ಒಲವ ಚಿಲಿಪಿಲಿ!!!
ಬಿಡುಗಡೆಯೇ ಬೇಡದ ಈ ಮೋಹಕೆ, ಪ್ರೇಮದ ಸುಧೆಯನ್ನು ನೀ ಹರಿಸಿದೆ

ಹಾರುತ್ತಾ ತೇಲುತ್ತಾ ಎಲ್ಲೆಲ್ಲೋ ಕಳೆದು ಹೋದೆ ನಾ
ಹೇಗೆಂದು ಬಣ್ಣಿಸಲಿ ಹೊಸದಾದ ಈ ಅನುಭವ
ನೋಡಿದ ಕಡೆಯಲ್ಲೆಲ್ಲಾ ಹೊಸದನ್ನೇ ಕಾಣುವೆನು
ನಿನ್ನೊಳಗೆ ಅವಿತು ನಾನು ನನ್ನೇ ಮರೆತೆನು
ಸಂತಸದ ಈ ಚೆಂದ ನೆನಪಿಗೆ ನನ್ನನ್ನೇ ನಾ ನಿನಗೆ ಧಾರೆ ಎರೆವೆ 


(In tunes of Yenendu hesaridali--- Anna bond movie )

Tuesday, May 29, 2012

Sad Moments

It was that part of life which always stood in dark side. I found myself ALONE in this big world, I was searching for the Special thing which was never mine. It was already out of boundaries. I was Sad, I was upset wanted to re-write the past, correct the mistakes, clear the misunderstandings, but thought TIME would HEAL all the PAIN.

I was wrong, I couldn't realize that I was not supposed to wait for a thing which had not thought me as PART of Life. I was happy enough to say I had enough Happiness which I shared with you. But the revert was that I was never part of it from other side. May be I had over looked the things. I was supposed to learn where and what was the change I was suppose to bring.

My mother always used to tell me the thing which is lost from life was never yours, it will be you who will try to bind it with you with a reason. May be that's true too!!!!

Now my view on past is changed, I want to move on with life. I am trying to create my own world which is to bring change for my carrier and personality. I wanna enhance my knowledge, build self confidence. Come on yaar!!! live on Life. There are many things which are beautiful in Life, The Nature, The Smile, The care, THE FRIENDSHIP. So please forget the pain of past don't ruin the Future for your past. It's true there is sufferings in past but  Future is not responsible for that, so I Live I Smile. Thanks to Amma for her care it is the most Precious thing I could ever think of.

Friday, May 25, 2012

ನೀ.. ನಾನ್

ನನ್ ಉಸಿರು ನೀ,  ನಿನ್ ಜೀವ ನಾ
ನನ್ ಬದುಕು ನೀ ನಿನ್ ಹೃದಯ ನಾ 
ನನ್ ಕಣ್ ನೀ, ನಿನ್ ನೋಟ ನಾ 
ನನ್ ಮಾತು ನೀ , ನಿನ್ ದನಿಯೇ  ನಾ 

ಮನದಲ್ಲಿ ಉಳಿದಂತ ಈ ಎಲ್ಲಾ ಭಾವನೆಗೆ 
ನೀ ತಾನೆ ಈಗ ತಂದೆ ಪನ್ನೀರ ಹನಿಯೊಂದ!

ನನ್ ಉಸಿರು..... 

ನನ್ನನ್ನು ನಾ ಈಗ ಮರೆತೆ, ನಿನ್ನಲ್ಲಿ ನಾ ಸೇರಿಹೋದೆ 
ಸಂತಸದ ಕಾರಂಜಿಯಾದೆ, ಒಲವಿನ ಹೊನಲನ್ನು ತಂದೆ!
ಹೇಗೋ ಏನೋ ಜೊತೆಯಾಗಿ ನೀ ಒಲಿದು ಈಗ ಬಂದೆ 
ಪ್ರೀತಿಗೆ ಸೆರೆಯಾಗಿ ನಾ ಕಳೆದು ಹೋದೆ 

ಕಡಲಲ್ಲಿ ನಾ ಅಲೆಯಾದೆನು, 
ಮಳೆಯಲ್ಲಿ ನಾ ಹನಿಯಾದೆನು
ಗಿಡದಲ್ಲಿ ನಾ ಹಸಿರಾದೆನು .... 
ಕಣ್ಣಲ್ಲಿ ನಾ ಬೆಳಕಾದೆನು !
 
ರಾಗದ ಮಿಲನದಿ ಭಾವಗಳ ಸಮಾಗಮ 
ಸ್ವರಗಳ ಮಿಡಿವ ಹೃದಯದ ಪರಿಕ್ರಮ 
ಉಸಿರ ಹಿಡಿವ ಬಂಧನಗಳ ಸಂಯಮ 
ಬಂಧಿಸುವ ಕೈಗಳ ಸ್ವತಂತ್ರ ಸಂಗ್ರಾಮ 

ಬಂಧನದಿ ಮುಕ್ತಳಾದೆನು 
 ಸಂಯಮವ ಕೈ ಹಿಡಿದೆನು 
ಮಿಡಿತವನು ಸಂಧಿಸಿದೆನು 
ಬೆಳಕನ್ನು ನಾ ಕಂಡೆನು!!!!

Thursday, May 10, 2012

ನಾ ನಿನ್ನ ಕಂಡೆ

ಹನಿ ಹನಿ ಮೂಡುತ ಸುರಿಯಿತು ಅಲ್ಲಿ ಪ್ರೇಮದ ಮಳೆ
ಮನೆ - ಮನ ತುಂಬಿತು  ಒಲಿವಿನ ನಿನ್ನ ಕರೆಯೋಲೆ 
ಸುಂದರ ಚಿತ್ರಣ ಬಿಡಿಸುವ ಆ ಜೀವ ಕಲೆ 
ಸ್ವಪ್ನದ ಆ ಕಲ್ಪನೆಯ ವಿಧ ವಿಧ ಸೆಲೆ 

ಹತ್ತಾರು ರಂಗಿನೊಡನೆ ಆಯಿತಲ್ಲಿ ನಿನ್ನ ಆಗಮನ 
ನಾಚುತ ರಂಗೋಲಿಯು ಬರೆಯಿತು  ಹೊಸ ಕವನ 
ಬೆಳಕಿನ ರಶ್ಮಿ ತುಂಬಿತು ಆ ಗಗನ 
ಮರೆಯಲ್ಲಿ ಉಳಿದ ನೋಡು ವರುಣ 

ಹೆಜ್ಜೆಯ ಗುರುತು ನಿನ್ನ ಬರುವಿಕೆಯ ದಿಟ್ಟ ಮಾಡಿತು
ಹಸಿರ ಸೀರೆಯ ನನ್ನೊಡನೆ ಪ್ರಕೃತಿ ಉಟ್ಟಿತ್ತು 
ನಿನ್ನ ಉಸಿರ ದನಿ ನನಗೆ ಕೇಳಿಸುತಿತ್ತು 
ಮನವು ನಿನ್ನ ಮರೆಯಲಿ ನೋಡುತ್ತಿತ್ತು 

ಕಾಣುವ ತವಕ ತಡೆಯದೆ ಹೊರಬಂದೆ 
ಮನದಣಿಯೆ ನಿನ್ನ ಕಣ್ ತುಂಬಿ ಕೊಂಡೆ 
ಹೃದಯದಲ್ಲಿ ನಿನ್ನ ದೀಪ ಬೆಳಗಿಸಿ ಕೊಂಡೆ 
ಆಗ ಕಣ್ಣಲಿ ಹನಿಯ ಪರದೆ ಕಂಡೆ 

Thursday, May 3, 2012

शायरी

जन्नत से दूर किसी को जाना नहीं
मुशील यह रहा कभी आसन नहीं
दुनिया भूल सकती हूँ इस पे कोई शक नहीं
तुम से इतना प्यार क्यों है इसका कोई जवाब नहीं!!!

छोड़ चुकी में सब कुछ तेरे लिए
जानू तुम हो सिर्फ मेरे लिए
दिल  यह बना है तेरे लिए
अपना  बनालो इसे मेरे लिए!!!!

जोगन बनी फिरू में इस महफ़िल में
दर्द दुनिया की सेहन लू इस दिल में
मुश्किले नहीं रहे  साथ चलें में
करीब आ के मिलालो आपनी नाज़ुरों को मेरी नजूरो में!!!!



 

Monday, April 30, 2012

ಪ್ರೇಮಿ

ಮಾಯಾ ಲೋಕದ ದಿಟ್ಟ ನಾವಿಕ, ಹೃದಯ ನೀಡುವೆ ಸ್ವೀಕರಿಸೆಯಾ?
ಭವ್ಯ ಲೋಕದ ದೀರ್ಘ ಪಯಣಕೆ ಅಣತಿಯನು ನೀ ಕೊಡುವೆಯಾ?
ಈಗಂತೂ ನಿನ್ನಲಿ ನಾ ನಿನ್ನಲಿ ಇರುವೆನು, ಮಾತಲ್ಲೇ ಮರೆಯುತಾ ನಾ ಮರೆಯುತಾ ಕುಣಿವೆನು !!!


ಕಂಡೆನು ಪಯಣದಿ ಮನದ ಅಂತರ್ಯವನ್ನು,  ಸುಂದರ ಮನಸಿನ ಒಬ್ಬ ಪ್ರೇಮಿಕನನ್ನು
ಕಳೆದು ಹೋದೆ ನೋಡಲ್ಲಿ ನಿನ್ನ ಪ್ರೇಮ ಧ್ಯಾನದಿ, ಸುಂದರ ಸ್ವಪ್ನ ತಂದ ಆ ಕ್ಷಣದಲಿ
ನನ್ನನೇ ....... ನಾ ಈಗ ಮರೆತನು

ಹೂವಿನ ಬನದಲಿ ಬಣ್ಣದ ಚಿತ್ರ ನೀನು, ರಂಗನು ತುಂಬುವ ನಾ ಹೊನ್ನಿನ ಕುಂಚವೇನು?
ಒಲಿವಿನ ಈ ಲೋಕದಲ್ಲಿ ಕಣ್ಣಿನಂತೆ ನೀನು, ನಿನ್ನ ಕಣ್ಣ ಕಾಯುವ ರೆಪ್ಪೆ ನಾನು,
ಹಿಡಿದಿರು....  ನನ್ನ ಈ ಕೈಯನು!!!


ಇಡುತ ನೀ ಹೆಜ್ಜೆಯ ಬಂದೆ ಹೃದಯದ ಬೀದಿಗೆ, ನೀಡುತ ಭಾಷೆಯ ನನ್ನ ಭಾವನೆಗಳಿಗೆ
ತಿಳಿಯದೆ ನಾ ಹೋದೆ ಪ್ರೀತಿಯ ಈ ಜಾಡನು, ಹುಡುಕುತ್ತಲೇ ಇರುವೆ ನಿನ್ನ ಕನಸನು
ಅನುಮತಿ ......ನೀ ಈಗ ಕೊಡುವೆಯಾ?

 " In tunes of song Yava seemeya - Johny mera naam movie"

Thursday, April 19, 2012

ನೆನಪು

ನೆನೆದು ನೆನೆದು ಅಳಿದೆ
ನಿನ್ನ ಬದುಕಲಿ ನಾನು ನಿನ್ನವಳಾಗಿ ಜೀವಿಸಿದೆ 
ತೋಳಲಿ ಸೇರಿ ಕಳೆದು ಹೋದೆ 
ನಿನಗಾಗಿ ಉಸಿರ ಹಿಡಿದು ಬದುಕಿದೆ !!!!

ಆಡಿ ಹೋದ ಮಾತುಗಳೆಲ್ಲಾ ಗಾಳಿಯಲ್ಲೆ ತೇಲಿದಂತಿದೆ
ಬಯಸಿ ಪಡೆದ ಆ ಆಣೆಗಳೆಲ್ಲಾ ಸಮಯದ ಬಂಧಿಯಾಗಿದೆ
ನೀ ಇಲ್ಲದೆ ನನ್ನ ಅಸ್ತಿತ್ವ ಮರೆತಂತಿದೆ 
ಒಮ್ಮೆ ನುಡಿಯಲಾರೆದೆ ಹೋದೆ ಏಕೆ?

ಸುತ್ತಮುತ್ತ ಬರೀ ಮೌನದ ಗೋಡೆಯಾಗಿದೆ
ದಾಟಲು ಆಗದ ನೋವಿನ ಬೇಲಿ ಸುತ್ತಿದಂತಿದೆ 
ಉತ್ತರ ಸಿಗದ ಈ  ಮೌನಕೆ ಪ್ರಶ್ನೆಯು ಇಲ್ಲವಾಗಿದೆ 
ಊಹಿಸದ ಲೋಕಕೆ ನನಗೆ ಆಮಂತ್ರಣ ಸಿಕ್ಕಿದೆ!!!!!

ಇರದೇ ಇದ್ದಂತಿದೆ, ಪಡೆದು ಕಳೆದಂತಿದೆ 
ಹಿಡದ ಕೈ ನೆರಳಂತಿದೆ
ಬೆಳಕೇ ಇಲ್ಲದೆ ಕಂಡ ಕತ್ತಲಂತಿದೆ 
ನಂಬಲಾಗದ ಸತ್ಯ ಇದೇ ಏನು?

 

Thursday, April 5, 2012

ಪುಟ್ಟು ಹುಡುಗ

ಸಮಾಜದ ಪ್ರತಿ ವ್ಯಕ್ತಿಯು ತನ್ನದೇ ಪುಟ್ಟ ಪ್ರಪಂಚದ ಮಾಲಿಕ, ದಿನದ ಆಗು ಹೋಗುಗಳ ನಡುವೆ ಯಾವ ರೀತಿಯಲ್ಲಿ ಬದುಕುವನೋ ತಿಳಿಯದು, ಆದರೆ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಮಹಾತ್ಮರು ಇದ್ದಾರೆ, ಅವರು ರೂಪಿಸಿದ ಆ ರೂಪುರೆಕೆಗಳು ಸಮಾಜಕ್ಕೆ ಪೂರಕ.

ಸಮಾಜದಲ್ಲಿ ಬದುಕುವ ನಮಲ್ಲಿ ಎಷ್ಟೋ ಮಂದಿ ಮನುಷತ್ವವನ್ನು ಎಷ್ಟರ ಮಟ್ಟಿಗೆ ಮರೆತಿರಬಹುದು ಎಂದಾದರೂ ಯೋಚಿಸಿದ್ದೀರಾ? ನಾವು ಪ್ರತಿ ದಿನ ನಡೆದಾಡುವ ರಸ್ತೆಯ ಬದಿಗಳಲ್ಲಿ ಎಷ್ಟೋ ಮಂದಿ ಭಿಕ್ಷೆ ಬೇಡುವ ಮಕ್ಕಳು, ಅವರ ಹರಿದ ಅಂಗಿಗಳು ಕೆದರಿದ ಕೂದಲು, ಕಣ್ಣಿರಿನ ಬಾವಿಗಳಾದ ಕಣ್ಣುಗಳು, ಸುಂದರ ಭವಿಷ್ಯದಿಂದ ವಂಚಿತರು, ಇದರ ನಡುವೆ ಅನಾಥರೆಂಬ ಅಸಹಾಯಕತೆ, ಅದಕ್ಕೆ ಉತ್ತರವ ನೀಡಲು ಯಾವ ದನಿಯು ಇಲ್ಲ. ಹೀಗೆ ಕಂಡ ಕಾಣುತ್ತಿದ್ದಂತೆ, ವಾಹನಗಳ ದಟ್ಟನೆಯ ನಡುವೆ ಸುಳಿದು ಹತ್ತಿರ ಇರುವ ಆಟಿಕೆಗಳನ್ನು ಮಾರಾಟ ಮಾಡುತ್ತ ಅತ್ತಿತ್ತ ಸುಳಿವ ಆ ಪುಟ್ಟ ಪಾದಗಳು, ಕಾರುಗಳ ಒಳಗೆ ಕುಳಿತ ಮಕ್ಕಳಿಗೆ ತಮ್ಮ ಆಟಿಕೆ ತೋರಿಸಿ ಹೇಗಾದರೂ ಇಂದಿನ ವ್ಯಾಪಾರದ ಆರಂಭ ಮಾಡಲು ಹವಣಿಸುವರು!

ಹೀಗೆ ನಿನ್ನೆ ನಾನು ಕಂಡ ಒಂದು ದೃಶ್ಯದ ತುಣುಕು ನನ್ನ ಕಣ್ಣ ಮುಂದೆ ಸುಳಿಯಿತು, ಪುಟ್ಟ ಹುಡುಗ ಸುಮಾರು ೭ - ೮  ವರ್ಷದವನಿರಬಹುದು. ಒಂದು ಕಾರಿನ ಬಳಿ ಬಂದು ತನ್ನ ಬಳಿ ಇದ್ದ ಚೀಲದಿಂದ ಆಟಿಕೆ ತೆಗದುಕೊಳ್ಳಿರೆಂದು ಗೊಗೆರದ, ಆದರೆ ಆ ಪುಣ್ಯಾತ್ಮ ಬೇಕು ಬೇಡ ಏನು ಹೇಳದೆ ಕಿಟಕಿಯ ಗಾಜು ಮುಚ್ಚಿದ, ಆ ಹುಡುಗನ ದುರದೃಷ್ಟವೇನೋ ಅವನ ಚೀಲ ಆ ಕಾರಿನ ಅಂಚನ್ನು ಉಜ್ಜಿಕೊಂಡು ಹೋಯಿತು, ಆ ವ್ಯಕ್ತಿ ಕಾರಿನಿಂದ ಇಳಿದು ಆ ಹುಡುಗನನ್ನು ಚೆನ್ನಾಗಿ ತಳಿಸಿದ, ನಿಜ ಹೇಳಬೇಕಂದೆರೆ ಆ ಚೀಲದಿಂದ ಕಾರಿಗೆ ಯಾವುದೇ ಹಾನಿಯಾಗಿರಲಿಲ್ಲ.

ಅಲ್ಲಿದ ಜನರೆಲ್ಲಾ ಆ ದೃಶ್ಯವನ್ನು ನೋಡುವ ಮೂಕ ಪ್ರೇಕ್ಷಕರಾಗಿದ್ದರು, ಅವನ ತಪ್ಪೇ ಇಲ್ಲದೆ ಅಷ್ಟು ಏಟನು ತಿಂದ ಆ ಮುಗ್ದ ಹೃದಯ ಅದೆಷ್ಟು ವೇದನೆ ಅನುಭವಿಸಿರಬಹುದು? ಆತನ ಜೊತೆ ಇದ್ದ ಹೆಂಡತಿ ಬಿಸಿಲಲ್ಲಿ ಬಂದರೆ ಎಲ್ಲಿ ಕರಗುವೇನೋ ಎನ್ನುವ ರೀತಿಯಲ್ಲಿ ಕಾರಿಗೆ ವಾಪಾಸಾದಳು, ಆ ಹುಡುಗ ಆತನ ಕೆಟ್ಟ ಬೈಗುಳ ಕೇಳಿ ಕೂಡ ತಾನು ಕೆಟ್ಟದಾಗಿ ವರ್ತಿಸಲಿಲ್ಲ, ಅಲ್ಲೇ ತನ್ನ ಸಹಚರನೊಬ್ಬ ಕೈವಸ್ತ್ರಗಳ ಮಾರುತ್ತಿದ್ದ, ಸೀಟಿ ಹೊಡೆದು ಅವನಿಗೆ ಕೈ ಬೀಸಿದ, ಈ ಮಹರಾಯ ಈಗ ಸ್ವಲ್ಪ ಹೆದರಿದ , ಆದರೂ ಅವನ ಕೈ ಹಿಡಿದು ಕಾರಿನ ಬಳಿ ಕರೆದೊಯ್ದು ಮಾತಾಡತೊಡಗಿದ.

ಅಷ್ಟರಲ್ಲಿ ಆ ಮತ್ತೊಬ್ಬ ಹುಡುಗ ಓಡಿ ಬಂದ, ಆತನಿಗೆ ಈ ಪುಟ್ಟ ಹುಡುಗ ೧೦ ರೂ ಕೊಟ್ಟು ಕರವಸ್ತ್ರ ಕರೀದಿಸಿ ಆ ಕಾರಿನವನಿಗೆ ಕೊಟ್ಟು ಚಿಲ್ಲರೆಯನ್ನು ಕೂಡ ಕೈಲಿ ಇತ್ತು ಬೆವರನ್ನು ಒರಿಸಿಕೊಳ್ಳುವಂತೆ ಹೇಳಿ ನಡೆದು ಹೋದ.

ನಿಜಕ್ಕೂ ಆ ಹುಡುಗ ನನ್ನ ನೆನಪಿನಲ್ಲಿ ಉಳಿದು ಹೋದ, ಎಷ್ಟೇ ಒಳ್ಳೆಯವರಾದರು ಒಮ್ಮೊಮ್ಮೆ ನಮ್ಮ ಕೋಪವ ನಾವು ಸ್ತಿಮಿತದಲ್ಲಿ ಇಡಲು ಕಷ್ಟವಾಗುತ್ತದೆ, ಆದರೆ ಆ ಪುಟ್ಟ ಹುಡುಗನ ವ್ಯಕ್ತಿತ್ವ ನನಗೆ ತಾಳ್ಮೆಯ ಪಾಠ ಕಲಿಸಿತು. ನನ್ನ ಈ "ಬ್ಲಾಗ್" ಆ ಹುಡುಗನಿಗಾಗಿ. ಆ ಪುಟ್ಟ ಪಾಠವ ಕೊನೆಯವರೆಗೂ ನೆನಪಲ್ಲಿ ಕೂಡಿಡುವೆ.

ಧನ್ಯವಾದಗಳು ನಿನಗೆ,  ವಿಶಾಲ ಹೃದಯದ ಪುಟ್ಟ ಹುಡುಗ !!!!

Tuesday, March 27, 2012

ಕಾಯ್ಕಿಣಿಯ ಕಂಡೆ

ನಾ ಆರಾಧಿಸುವ ಕವಿಯ ಮುಂದೆ
ಮಾತಾಡಲಾಗಲಿಲ್ಲ  ಆ ದಿನ ನನಗೆ
ಸುಮ್ಮನಿದ್ದ ನನ್ನಲ್ಲಿ ಕವನಗಳ ಕದನ 
ಅಲ್ಲಿ ನನ್ನೊಳಗೆ ಮಾತುಗಳ ಸರಿಗಮ, ಸಮಾಗಮ!!

ನಾನು ಹುಡುಕುತ್ತಿದ್ದ ಜಾಡು ಸೇರಿದ್ದು
ಒಂದು ಪುಸ್ತಕದ ಅಂಗಡಿಯ
ರೆಪ್ಪೆಗಳು ಕದಲದೆ ಹುಡುಕ್ಕಿದ್ದು
ಆ ಕವಿಯ ಒಂದು ಸಣ್ಣ ಜಲಕ್ ನ !!!  



ಟಿಕ್ ಟಿಕ್ ಓಡುತ್ತಿದ್ದ ಗಡಿಯಾರದ ಸದ್ದಿನೊಡನೆ
ನನ್ನ ಹೃದಯದ ಮಿಡಿತದ ಶಬ್ದಮಾಲೆ
ಸಂತಸದ ಆ ಸಂದರ್ಭದಲ್ಲಿ
ನಾ ತೂಗಿಕೊಂಡೆ ಹರುಷದ ಜೋಕಲೆ

ಕೊನೆಗೆ ಕಂಡೆ ಆ " ಚಾರ್ ಮಿನಾರ್ " ವ್ಯಕ್ತಿಯ 
ಹಿಂದಿಂದ ಕಂಡಂತಾಯ್ತು ಸೂರ್ಯ ಕಾಂತಿಯ
ನಾನು ಸ್ಪರ್ಶಿಸಿದೆ, ಸೂರ್ಯಕಾಂತಿ ಹೂ ತರದಿ
ಮರೆತು ಹೋದೆ ಪದಗಳ, ಸೌಭಾಗ್ಯದ ಸುಳಿಯಲಿ

ಅವರ ಕಂಡ ಆ ಸಂತಸವ ಮನದಲ್ಲಿ ತುಂಬಿಕೊಂಡೆ
ಹಸ್ತಾಕ್ಷರವ ವರವಾಗಿ ಪಡೆದೆ,
ಅರ್ಪಿಸಿದೆ ಕವನಗಳ ಅವರ ಮಡಿಲಲಿ
ಕಾಯುತಲಿರುವೆ ಈಗಲೂ ಅವರ ಕಾವ್ಯಮಯ ಉತ್ತರಗಳಿಗೆ!!!

Tuesday, March 13, 2012

ರಾಗ

ಎಲ್ಲೊ ದೂರದಿ ನೀನು ಹಾಡಿದ
ರಾಗವನ್ನು ಆಲಿಸಿದೆ....
ನಿನ್ನ ಕಾವ್ಯದ ರಾಗದೊಳಗೆ
ನನ್ನ ಭಾವನೆ ಬೆರೆಸಿದೆ .....

ಸಂಧಿಗೊಂದಿಯ ನಡುವೆ ಹರಿವ
ಜಲಧಾರೆಯಂತೆ ನೀನು....
ನನ್ನ ಮನದ ಅರಮನೆಯ
ದಿವ್ಯ ಜ್ಯೋತಿಯ ಬೆಳಕು ನೀನು .....
ಹೇಗೆ ತಿಳಿಸಲಿ ಮೌನ ಭಾಷೆಯ ಹೃದಯದ ಅಂತರಾಳವನು!!!
ಅಲೆದು ಅಲೆದು ದಣಿದೀಹುದೀ ಮನ ಅರಿಯಲು ನಿನ್ನ ರಾಗವನು !!!!

ಎಲ್ಲೊ ದೂರದಿ ನೀನು ಹಾಡಿದ ........

ಸಪ್ತಸಾಗರದ ಸಪ್ತಸ್ವರಗಳ ಅಡಗಿಸಿರುವ
ಆ ರಾಗ......
ಮರೆಯಬಹುದೆ ಎಂದಾದರೂ ನೀ
ನಾನು ತಂದ ಉದ್ವೇಗ
ನೆರಳು ಬಿಸಿಲಲಿ ಆಡುವ ಜೋಕಾಲಿ, ನಿಲ್ಲದಿರಲಿ ಎಂದೆಂದೂ
ಜೀವಂತವಾದ ನಿನ್ನ ನೆನಪು ಸೇರಲಿ ಗುರಿಯನು ತಾನೆಂದೂ


-----------------------------------------------------------------------------------------------------------------------
ನನ್ನ ಮೊದಲ ಭಾವಗೀತೆ ................

Monday, March 12, 2012

ನೀ

ನೀ ಸುಳಿದೆ ಮರಗಳ ಮರೆಯಲಿ
ಆಡುತ ಕಣ್ಣಾ ಮುಚ್ಚಾಲೆ,
ಹರಡುತ ಬಣ್ಣಗಳ ಸುಂದರ ರಂಗು
ಮೆರೆಸುತ್ತಿದ್ದೆ ನೀ ನಿನ್ನ ಮೆರುಗು

ನಾ ಸಾಗುತ್ತಿದ್ದ ಹಾದಿಯಲ್ಲೇ ನಿನ್ನ ಪಯಣ
ಹೆಜ್ಜೆ ಹೆಜ್ಜೆಯಲ್ಲೂ ನಿನ್ನದೇ ಧ್ಯಾನ
ದಿನಚರಿಯ ಭಾಗ ಕಳೆದು ಹೋದಂತೆ ನನಗೆ
ಮರೆಯಾಗಿ ನೀ ದೂರ ನಿಂತರೆ ಹೇಗೆ??

ವಾಹನದ ಚಕ್ರಗಳು ಉರುಳುತಿದ್ದರೂ ನಾನು ಕಳೆದು ಹೋದೆ ಎಲ್ಲೊ
ಆಲಿಸುತ್ತಿದ್ದೆ ನಿನ್ನ ದನಿಯನ್ನು ಕುಳಿತು ಅಲ್ಲೆಲ್ಲೂ
ನೀ ಆಗಲಾರೆ ದೂರ ನನ್ನಿಂದ,
ಇದ್ದರೂ ನಮ್ಮಿಬ್ಬರ ನಡುವೆ ಈ ಸಮಯದ ಅಂತರ

ಜಗದ ಯಾವುದೇ ಮೂಲೆಯಲಿ ನಾ ಉಳಿದರೂ
ಕಾಣುವೆ "ರವಿ" ನಿನ್ನ ಮೊಗವ ನಾ ಎಲ್ಲೆಲ್ಲೂ
ಹರಿಸು ದಿನವು  ನೀ ನಿನ್ನ ಕಿರಣಗಳ ಸುರಿಮಳೆ
ನಾ ತೊಡುವೆ ಆಗ ಆ ಚಿನ್ನದ ರೇಖೆಯ ಬಳೆ




 
Creative Commons Licence
This work is licensed under a Creative Commons Attribution-ShareAlike 3.0 Unported License.