ಕಾರ್ಮೋಡದ ಒಡಲಿಂದ ಹರಿದಿತ್ತು ಮಳೆಯ ಮಾಲೆ
ಮಿಂಚಿನ ಕಿರಣಗಳ ಸಾಲು ಸಾಲೇ
ವೇಗವಾಗಿ ಬೀಸುತ್ತಿದ್ದ ಗಾಳಿಯ ಅಲೆ
ನೀರಿನ ಬಿಂದುವಿನ ಮುತ್ತಿನ ಬಲೆ
ಮನೆಯ ಮೂಲೆಯ ಕಿಟಕಿಯಲಿ ಕಂಡೆ
ನೀನು ನನ್ನ ನೆನಪಿನ ಅಲೆಯಲ್ಲಿ ತೇಲಿಬಂದೆ
ಹಸಿರು ಬಣ್ಣದ ಆ ಎಲೆಗಳ ಮೇಲೆ ಬೆಳ್ಳಿಯ ಉಂಗುರ
ಸುಂದರ ಪರಿಸರ ಹಾಸಿತು ಪ್ರೇಮದ ಹಂದರ
ಮಳೆಯಲಿ ನೆನದ ಆ ನೆನಪುಗಳು
ತಂಪನು ಎರೆದ ನಿನ್ನ ಸವಿ ಮಾತುಗಳು
ತಣ್ಣನೆ ಗಾಳಿಯಂತ ನಿನ್ನ ಸ್ನೇಹ
ಎಲ್ಲವೂ ಮನವ ಕಾಡುತಿಹುದು ಈಗ
ಹೊಸ ಲೋಕದ ಸೃಷ್ಟಿ ಅಲ್ಲಿ
ಮಳೆಯ ಹನಿಯ ಚಿಟ ಪಟದಲ್ಲಿ
ನೀರಿನ ಆ ಮುತ್ತಿನಲಿ
ನಿನ್ನ ಮೊಗವ ಕಂಡೆನಲ್ಲಿ
ಪ್ರತಿ ಎಲೆಯು ನಿನ್ನ ಹೆಸರ ಕೂಗಿದಂತೆ
ನನ್ನ ಎದೆಯ ನುಡಿಯ ನುಡಿದಂತೆ
ಅನಿಸಿಹುದು ನನಗೆ ಹೀಗೆ ಇಲ್ಲಿ
ನೀನು ಸಹ ನನ್ನನು ನೆನದಿರಬಹುದೇ ಅಲ್ಲಿ?
-- ಅಂತಹ ಪ್ರತಿ ನಿನ್ನ ನೆನಪಿಗೂ ನನ್ನ ಈ ಕವಿತೆ
No comments:
Post a Comment