Tuesday, November 6, 2012

ಮೌನ

ಮೌನದ ನಡುವೆ ಮೌನದ ಕದನ
ಮೌನವಿಲ್ಲದ ಕಡೆ ಮೌನದ ತಪನ
ಮೌನದಿಂದ ಮೌನದ ಜನನ
ಮೌನವೆ, ನಿನಗೆ ಇದೋ ಮೌನದ ನಮನ

ಮೌನ ಬಂಧಿಸಬಲ್ಲದು  ಮಾತಿನ ಆಳ
ಮೌನಕೆ ತಿಳಿದಿದೆ ಶಾಂತಿಯ ಗಾಳ
ಮೌನ ಸಿಲುಕದು ಎಂದೂ ಕೋಪದ ಜಾಲ
ಮೌನ ಆವರಿಸಬಲ್ಲದು ಪ್ರತಿಯೊಂದು ಸ್ಥಳ!

ಮೌನ ನೀ ನಿರ್ಮಲ, ಮೌನ ನೀ ಶಾಂತ
ಮೌನದ ಒಲುಮೆ ಆಗಾಧ ಮತ್ತು ಅನಂತ
ಮೌನವಿರಬೇಕು ಜಗದ ಸುತ್ತಮುತ್ತ
ಮೌನ ಸೃಷ್ಟಿಸಿದೆ ಈ ಕವಿತೆಯ ವೃತ್ತ!

ಮೌನವಿರುವಾಗ ಮೌನದ ಭಯವೇಕೆ?
ಮೌನವಿರುವಾಗ ಮನದ ದಿಗಿಲೇಕೆ?
ಮೌನವಿಹುದು ಎತ್ತರ, ನಿರಂತರ
ಮೌನವೇ ಒಮ್ಮೊಮ್ಮೆ ಎಲ್ಲ ಪ್ರಶ್ನೆಯ ಉತ್ತರ!


Thursday, September 27, 2012

ಜೊತೆ ನೀ.....

ದನಿ ನನ್ನಾ ದನಿ, ಸಣ್ಣ ಕರೆಯ ಮಾಡಿದೆ ಇಲ್ಲಿ
ಹನಿ ಕಣ್ಣ ಹನಿ, ಜಿನುಗಿದೆ ನೋಡು ಈ ಕಣ್ಣಲಿ!!
ಆ ದನಿಯಲ್ಲಿಯೂ ಆ ಹನಿಯಲ್ಲಿಯೂ, ಈ ಮುಗ್ದತೆಯ ಹೇಗೆ ಕರಗಿಸಲಿ?

ನೀ ಇರಲು ಎದುರಲಿ, ನೆರಳಿನ ರೀತೀಲಿ.. ಜೀವಂತವಾದೆ ನಾ ಇಲ್ಲಿ...
ಗೆಲುವೆ ಇಲ್ಲದ ಸೋಲಲ್ಲಿಯೂ ನಾ ಗೆಲುವನ್ನೇ ಪಡೆದೆ ಅಲ್ಲಿ  ..
ದನಿ ನನ್ನಾ ದನಿ, ಸಣ್ಣ ಕರೆಯ ಮಾಡಿದೆ ಇಲ್ಲಿ......


ಜೊತೆಯೇ ಸೇರದ ರೈಲಿನ ಹಳಿಯಂತೆ.. ಜೊತೆ ಇಲ್ಲದೇ ಜೊತೆ ನೀ ಆದೆ...
ಬಣ್ಣ ಕಳೆದ ಮಳೆ ಬಿಲ್ಲಿಗೆ, ಬೆಳಕಿನ ಬಣ್ಣವ ನೀ ನೀಡಿದೆ,
ಬಿರುಗಾಳಿಯಲ್ಲಿ, ಬಂದೆ ನೀ ತಂಗಾಳಿಯ ಹಾಗೆ, ಬರುಡು ಭೂಮಿಗೆ ಮಳೆ ಹನಿಯ ಹಾಗೆ ನೀ ಬಂದೆ ...
ಕಾಣದ ಲೋಕದಿ, ಸ್ವರ್ಗವ ತಂದೆ ನೀ, ನನ್ನ ಜೀವನದ ಜೀವ ಬಿಂದು ನೀ........

ನೀ ಇರಲು ಎದುರಲಿ, ನೆರಳಿನ ರೀತೀಲಿ.. ಜೀವಂತವಾದೆ ನಾ ಇಲ್ಲಿ...
ಗೆಲುವೆ ಇಲ್ಲದ ಸೋಲಲ್ಲಿಯೂ ನಾ ಗೆಲುವನ್ನೇ ಪಡೆದೆ ನಾ ಅಲ್ಲಿ  ..


ದಾರ ಕಡಿದ ಗಾಳಿಪಟದಂತೆ, ಗುರಿ ಇಲ್ಲದೆ ಒಂಟಿಯಾಗಿದ್ದೆ,
ಜೀವವಿದ್ದರೂ ಇಲ್ಲದ ಹಾಗೆ ಮಾತನ್ನೇ ನಾ ಮರೆತಿದ್ದೆ...
ನೀನು ಬಂದಮೇಲೆ ನಾನು ಪದಗಳ ಒಡತಿಯಾದೆ, ಆ ಪದಗಳ ಬಂಧನದಿ ನಾನು ಈಗ ಕಳೆದುಹೋದೆ
ನಿನ್ನ ಈ ಒಲವಿಗೆ, ನಿನ್ನ ಈ ಪ್ರೀತಿಗೆ,ನಾ ಎನ್ನನ್ನು ನೀಡಲಿ?

ನೀ ಇರಲು ಎದುರಲಿ, ನೆರಳಿನ ರೀತೀಲಿ.. ಜೀವಂತವಾದೆ ನಾ ಇಲ್ಲಿ.......
ಗೆಲುವೆ ಇಲ್ಲದ ಸೋಲಲ್ಲಿಯೂ ನಾ ಗೆಲುವನ್ನೇ ಪಡೆದೆ ನಾ ಅಲ್ಲಿ  .. ..

ದನಿ ನನ್ನಾ ದನಿ, ಸಣ್ಣ ಕರೆಯ ಮಾಡಿದೆ ಇಲ್ಲಿ......

Monday, August 13, 2012

ಕಲೆಯ ಗುಡಿ - ಕವಿ ಮನೆ

       ದಟ್ಟ ಹಸಿರ ನಡುವೆ ತನ್ನ ವಿಶಾಲ ಆವರಣವ ಹೊಂದಿ ಪ್ರವಾಸಿಗರ, ಕನ್ನಡ ಅಭಿಮಾನಿಗಳ ತನ್ನತ್ತ ಬರಮಾಡಿಕೊಳ್ಳುತ್ತಿದ್ದ ಆ ತಾಣ, ಕಿರಿದಾದ ತಿರುವುಗಳ್ಳನ್ನು ಒಳಗೊಂಡು ಆ ಪರಿಸರವ ಸವಿಯುವ ಕುತೂಹಲ ಇಮ್ಮಡಿಯಾಗಿಸುತ್ತದೆ. ಅಲ್ಲಿ ಕಾಲಿಡುತ್ತಿದ್ದಂತೆ ಆ ಮನೆಯ ಸುಂದರ ಚಿತ್ರಣ ಮನ ಹಾಗೂ ಮೊಗವ ತಿಳಿಯಾಗಿಸುತ್ತದೆ, ಆ ಕವಿಗೆ ಕವಿತೆಗೆ ಸ್ಪೂರ್ತಿಯೇನೆಂಬೂದರ ಅರಿವಾಗುತ್ತದೆ.


       ಎತ್ತರ ಬೆಳೆದ ಅಡಿಕೆ ತೋಟಗಳು, ಹಸಿರಿನ ರಂಗನ್ನು ಎಲ್ಲೆಡೆ ಪಸರಿಸಿದ್ದ ಭೂಮಿತಾಯಿ, ಪ್ರಶಾಂತವಾಗಿರುವ ಆ ನೆಲ ನಿಮ್ಮನ್ನು ಭಾವನ ಲೋಕಕ್ಕೆ ಕರೆದೊಯ್ಯುತ್ತದೆ. ಆ ಕವಿಯ ಜನ್ಮ ಸ್ಥಳ "ಕುಪ್ಪಳಿ", ಆ ಸ್ಥಳ ಕವಿಯ ಕಾವ್ಯಗಳ ಕನ್ನಡಿ. ಇದು ನಮ್ಮ ರಾಷ್ಟ್ರ ಕವಿ ಕುವೆಂಪುರವರ ಪಾರಂಪರಿಕ ಒಟ್ಟು ಕುಟುಂಬದ ಬಾಂಧವ್ಯವ ಸಾರುವ ಮನೆ.

       ಕುಪ್ಪಳಿ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆಯಲ್ಲಿದೆ, ಕೊಪ್ಪ ಇಂದ ಕುಪ್ಪಳಿ ತಲುಪುವ ಮಾರ್ಗ ಮಲೆನಾಡಿನ ನಿಸರ್ಗವ ಬಣ್ಣಿಸುವುದು. ಮೊದಲಿಗೆ ಹಾದಿಯಲ್ಲಿ ಕವಿಶೈಲ, ಅಲ್ಲಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನದ ಮನದ ದುಗುಡಗಳ ತೊರೆಯಬಲ್ಲ ನಿರ್ಮಲ ಶಾಂತಿಯ ಮೈದುಂಬಿಸಿಕೊಳ್ಳಬಲ್ಲನು. ಕವಿಯ ಪ್ರತಿ ಹೆಜ್ಜೆಯ ಕವಿತೆಯ ಸ್ಪರ್ಶ ಅಲ್ಲಿ ಸಿಗುತ್ತದೆ.

ಕವಿ ಶೈಲ
"ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು 
ಕಲಾವಂತನಿಗೆ ಅದು ಸಗ್ಗ ವೀಡು "
- ಕುವೆಂಪು 
        
       ಈ ಮೇಲಿನ ಎಲ್ಲಾ ಪದಗಳು ಅಕ್ಷರಃ ಸಹ ಸತ್ಯ. ತನ್ನ ಒಡಲಲ್ಲಿ ಆಪಾರ ಸೌಂದರ್ಯವ ಅಡಗಿಸಿಕೊಂಡು ಎಲ್ಲರನು ತನ್ನಲ್ಲಿ ಮಂತ್ರಮಗ್ದವಾಗಿಸಬಲ್ಲದು. ಒಮ್ಮೆ ಯಾರೇ ಅಲ್ಲಿ ಬಂದರು ಆ ಒಲವಲ್ಲಿ, ಪ್ರಕೃತಿಯಲ್ಲಿ ಕಳೆದು ಹೋಗುವುದು ಸತ್ಯ. ಕವಿಗೆ ಬಹಳ ಹತ್ತಿರವಾದ ಈ ಕವಿಶೈಲ ಆವರ ಎಷ್ಟೋ ಕವನ ಕಾದಂಬರಿಗಳ ಹುಟ್ಟು ಹಾಕಿದ ಮಾತೃ ಸ್ವರೂಪಿ.

    ಕವಿ ಆರಾಧಿಸುವ ಆ ಕವಿಶೈಲದಲ್ಲಿ ಅವರ ಸಮಾಧಿ ಹಾಗೂ ಧ್ಯಾನ ಪೀಠ ಇದೆ, ಕನ್ನಡವ ಉನ್ನತ ಪ್ರಗತಿಗೆ ಕರೆದೊಯ್ದ ಕವಿಯ ಆರಾಧನಾ ಸ್ಥಳಕ್ಕೆ ಒಮ್ಮೆ ಭೇಟಿ ಕೊಡಿ. 

   ಅಲ್ಲೇ ಸಮೀಪದಲ್ಲಿ ಕವಿಯ ಮನೆ ಇದೆ, ಅವರ ಬಾಲ್ಯದ ನೆನಪುಗಳಿಂದ ಅವರ ಕೊನೆಯ ದಿನಗಳವರೆಗಿನ ಎಲ್ಲಾ ವಿವರಗಳು ಅಲ್ಲಿ ತಿಳಿಯಬಹುದು. ಆವರ ಮನೆಯ ಪ್ರತಿ ಹೆಜ್ಜೆಯಲ್ಲೂ ಕನ್ನಡದ ಸಂಸ್ಕೃತಿಯ, ಮಲೆನಾಡ ಸೊಗಡ ಸವಿಯಬಹುದು. ಅಲ್ಲಿಯೇ ಕುವೆಂಪುರವರ ಪುಸ್ತಕಗಳ ಮಾರಾಟ ಅಂಗಡಿ ಇದೆ, ಸ್ವಲ್ಪ ರಿಯಾಯಿತಿ ದರದಲ್ಲಿ ಪುಸ್ತಕಗಳ ಕೊಳ್ಳಬಹುದು.

 "ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!" 
- ಕುವೆಂಪು 
   ಕನ್ನಡದ ಅಭಿಮಾನವ ಎತ್ತಿ ಸಾರುವ ಈ ಗುಡಿ ನಿಜಕ್ಕೂ ಕಲೆಯ ಸೆಲೆ, ನವ್ಯ ಕವಿಗಳಿಗೆ  ಸೂರ್ಯ ರಶ್ಮಿ ಈ ನಾಡು. ಇಲ್ಲಿನ ಕವನ ಸಂಸ್ಕೃತಿಯ ಸಮರಸವ ಎತ್ತಿ ಹಿಡಿದು, ಕಾವ್ಯ ದೀಪವ ಬೆಳಗಿ ಕನ್ನಡದ ಉನ್ನತಿಯ ಅರಿವು ಮೂಡಿಸಬೇಕಿದೆ.

 
 



Monday, July 30, 2012

ಕವನ

ಮೆಲ್ಲನೆ ಮೂಡಿದ ಅವಿರತ ಕದನ
ಕಿರಿದಾದ ಮನದ ಕೋಟೆಯಲಿ ಆವರಿಸಿದ ಮೌನ
ಸಪ್ಪಳವ ಇಂಗಿಸಲು ಹೃದಯದ ತಪನ
ಬೆರಗಾಗಿ ನೋಡುತಿದೆ ನನ್ನನು ಈ ಜೀವನ!

ಮುಗ್ದ ಒಲವಲಿ ಆಕ್ರೋಶವೇಕೇ?
ಹಿಡಿದಿಡುತ ನಿನ್ನನು ನೀ ಬಂಧಿಸಬೇಕೆ?
ತಿಳಿಯಬೇಕಿದೆ ಈಗ ಮನದ ಆಂತರ್ಯ
ಸ್ಪರ್ಶಿಸುವಾಸೆ ಈ ಜೀವನದ ಸೌಂದರ್ಯ

ಮುಸುಕಿನ ಒಳಗಡೆ ಸೃಷ್ಟಿಯ ಕನಸು
ಸರಿ ಸಮವಲ್ಲ ಇದು ಬಂಧನದ ಸೊಗಸು
ಆಗಸದ ಎಡೆಗೆ ಏರಬೇಕು ಮಾಡು ಇದನು ನನಸು
ತೃಪ್ತಿ ಇರದು ಹಾಗಾದರೂ ಇದು ಮುಗ್ಹ ಮನಸು?

ಮೂಡಿ ಬರುವ ಮಧುರ ಆಲಾಪನೆ,
ನೀಗದೇಕೆ ಜೀವನದ ಸಣ್ಣ ಸಣ್ಣ ಆಕ್ಷೇಪಣೆ?
ಕಲ್ಮಶ ಪರಿಶುದ್ದತೆಯ ವಿಶ್ಲೇಷಣೆ
ಸುಪ್ತ ಭಾವನಾ ಲಹರಿಗೆ ಸಿಗಲು ಮನ್ನಣೆ 

Monday, July 23, 2012

ಕರೆ

ಕನಸಿನ ಜೊತೆಯಲಿ ನೆನಪಿನ ಮಡಿಲಲಿ
ಒಲವಿನ ಮಳೆ ಹನಿಯು ಸುರಿದಿದೆ
ಕೇವಲ ಉಸಿರಲಿ ಹಾಡುವ ಹಾಡಲಿ
ನೆನೆದು ನಿನ್ನನ್ನು ಜೊತೆ ಕರೆಯುವೆ !!

ಮನಸಿನ ಮೂಲೇಲಿ ಕೂಡಿಟ್ಟ ಪದದಲಿ
ಕವಿತೆಯ ಕೊರಳಲಿ, ನಿನ್ನ ದನಿಯು ಸೇರಲಿ,
ಸಾವಿರ ಸ್ವರದಲಿ, ಬರೆಯುವ ಹೆಸರಲಿ,
ನೆನೆದು ನಿನ್ನನ್ನು ಜೊತೆ ಕರೆಯುವೆ !!

ನೋಡುವ ಲೋಕದಿ, ಕಂಡ ಈ ನೋಟದಿ
ಭಾವನೆಯ ಸುಳಿಯಲಿ, ಮೂಡುವ ಗುಳಿಯಲಿ
ಸುಳಿಯುವ ಗಾಳಿಲಿ, ಬಣ್ಣಗಳ ಹರಡಿದ ಬಾಳಲಿ
ನೆನೆದು ನಿನ್ನನ್ನು ಜೊತೆ ಕರೆಯುವೆ !!

ನಡೆಯುವ ಹಾದಿಲಿ, ನೀಡಿದ ಆಣೆಲಿ,
ಪಯಣದ ಜೊತೆಯಲಿ, ನುಡಿದ ಪದದಲಿ,
ಕೂಗುವ ಹೆಸರಲಿ, ಹೆಜ್ಜೆಯ ಸದ್ದಲಿ
ನೆನೆದು ನಿನ್ನನ್ನು ಜೊತೆ ಕರೆಯುವೆ !!



 

Friday, June 22, 2012

ಹಸಿವು

ಹಸಿವು, ಹಸಿವೆಂದರೆ ನೋವು
ಹಸಿವೆಂದರೆ ರೋಧನ
ಆಲಾಪನೆ ಮಾಡದು ಹೊಟ್ಟೆ, ಆದರೂ ರಾಗದಿ ಬೆರೆತ ಸ್ವರ
ಹಹಹ!!! ನಗುವಿರೇಕೆ ನೀವು, ತಿಳಿದೀತೇ ನಿಮಗೆ ಅದರ ದುಃಖ

ದೇಹವು ದಣಿವುದೇಕೆ? ಆಹಾರದ ಬಯಕೆ ಏಕೆ?
ಪ್ರಕೃತಿ ನಿಯಮ ಇದು! ಬೇಡವೆಂದು ಜರಿದರು ಬಿಡುವುದುಂಟೆ ?
ಒಂದು ದಿನದ ಒಂದು ಸರದಿಯ ಮರೆತರೂ
ಇಷ್ಟೊಂದು  ಸುಡುವುದು ಒಳಗೆ ತಾನೇಕೆ?

ಕೋಪ ರೋಷದ ಕಿಚ್ಹ ಹೊರದೂಡುವುದು
ಮನದಲಿ ನಿರೀಕ್ಷಣೆಯ ದೀಪ ಹಚ್ಚುವುದು
ಕೊನೆಯ ತುದಿಯ ಸೇರಿ ಹೊಸ ಆಲೋಚನೆ ಹುಟ್ಟಿಸುವುದು
ಕಣ್ಣಲ್ಲಿ ಇಲ್ಲದ ಕನಸ ಹುಟ್ಟಿಸುವುದು!!


ಹಸಿವು, ಹಸಿವೆಂದರೆ ನೋವು
ಹಸಿವೆಂದರೆ ರೋಧನ

Monday, June 18, 2012

ದೂರ

ಏಕಾಂತವಾಗಿದೆ ಏಕೆ ಈ ಜಾಗಃ ಇಲ್ಲಿ ..... ನೀನು ಇಲ್ಲದೆ, ನನ್ನ ನೋಡದೆ
ಕತ್ತಲು ತುಂಬಿದೆ ನೋಡು ನೀನು ಇಣುಕದೆ ...... ಕನಸುಗಳು ಬೀಳದೆ
ನಾಲ್ಕು ಹೆಜ್ಜೆಯೂ ದೂರ ಎನಿಸಿದೆ...ನೀನು ಜೊತೆ ಬರದೇ...

ಕಾಣೆಯಾದೆ  ನಾನು ಈಗ ನೋಡು ನಿನ್ನದೇ ನೆನಪಿನಲ್ಲಿ
ಸುತ್ತುತಿಹುದು ನಿನ್ನ ನೆರಳು ದೂರ ಇದ್ದರು ನೀ ಅಲ್ಲಿ
ನಾನು ಕಳೆದು ಹೋಗುತಿರುವೆ ನೋಡು ನಿನ್ನದೇ ಧ್ಯಾನದಲ್ಲಿ
ಹೇಗೆ ಹೇಳಲಿ ಈ ತಳಮಳವ ಇಂದು ನಾನು ನಿನ್ನಲ್ಲಿ

ಹ್ರೀ ಎಂಬ ಜೇಂಕಾರ ನಿನ್ನ ಒಮ್ಮೆ ನೋಡಿದರೆ ಮೂಡಬಹುದೇನೋ
ನಿನ್ನಲ್ಲಿ ನಾನು ಸೇರಿ ಹೊಸ ರಾಗವನ್ನು  ಹಾಡಾಬೇಕಿನ್ನು !!

 ಬೆಳಗ್ಗೆ ಎದ್ದು ನೋಡಿದರೆ ಇಲ್ಲಿ ನಿನ್ನ ಉಪಸ್ಥಿತಿಯೇ ಇಲ್ಲ
ಮುತ್ತನಿಟ್ಟು  ನನ್ನ ತಬ್ಬಿಕೊಳ್ಳುವ ಕೈಗಳಿಗ ಮರೆಯಾಯಿತಲ್ಲಾ
ನಾನು ಸಿಂಗರಿಸಿಕೊಂಡರೂ  ನೋಡುವ ಕಣ್ಣು ಇಲ್ಲಿಲ್ಲಾ
ನಿನಗಾಗಿ ನಾ ಈಗ ಕಾಫಿ ಮಾಡಬೇಕಿಲ್ಲ

ಏಕೆ ಹೀಗೇಕೆ ನಮ್ಮ ನಡುವೆ ಬಂಧನ?
ನೀ ಇಲ್ಲಿ ನಾ ಅಲ್ಲಿ ಭೂಮಿ ಎರಡಂತೆ ಆಯಿತೀಗ!!
ನಿನ್ನ ನೆನಪಿನಲೇ ಈಗ ನನ್ನ ಸಮಯದ ಹೋರಾಟ
ಉಡುಗೊರೆಯ ನೀಡಿದೆ ನೀನು ನನಗೆ ಸಂಯಮದ ತೋಟ !!

Creative Commons Licence
This work is licensed under a Creative Commons Attribution-ShareAlike 3.0 Unported License.