Monday, May 11, 2026

 ಇಂದು ವಿಶ್ವ ತಾಯಂದಿರ ದಿನಾಚರಣೆ, 

ಬೆಳಿಗ್ಗೆಯಿಂದ ಒಂದೆರಡು ಸಾಲಾದರೂ ಬರೆಯೋಣವೆಂದು ಇದ್ದೆ ಆದರೆ, ಮರೆತ್ತಿದೆ ನಾನು ಕೂಡ ಈಗ ತಾಯೆಂದು , ಬಿಡುವಿರದ ದಿನ ಕೈ ತುಂಬಾ ಕೆಲಸ .

ತಾಯಿ ಎಂದಿಗೂ  ಮನೆಯ ಆಧಾರ . ನನ್ನ ತಾಯಿ ಮೃದು ಮನಸಿನ ದೇವತೆ , double graduate ಆದರೂ ಉತ್ತಮ house wife. ಆಕೆಯದು ಸ್ವಾವಲಂಬನೆಯ  ಜೀವನ, ನನ್ನ ಸ್ವಾವಲಂಬನೆಯ character ಆಕೆಯ ಬಳುವಳಿ, ಅದನ್ನು ನನ್ನ ಗಂಡ ಬಹಳ ಬಾರಿ ರೇಗಿಸಿದ್ದು ಉಂಟು.

ನನ್ನ ತಂದೆಯ ನಂತರ ಮನೆಯ ಜೊತೆಗೆ  ನಮ್ಮ ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ, ಆ ಸಮಯದಿ ಆಕೆ ಬಹಳಷ್ಟು ಒಂಟಿತನವನ್ನು ಅನುಭವಿಸಿದ್ದಳು, ಆಗ ನನಗೆ ಅದರ ಸುಳಿವು ಸಿಗದಂತೆ ಮರೆಮಾಚಿದ್ದಳು ಹಸನ್ಮುಖಿ ನನ್ನಮ್ಮ.

ಇಂದು ಅವಳಿಲ್ಲ , ಆದರೆ ಈಗೀಗ ನನಗೆ ಅವಳ ಅನುಭವದ ಮಾತುಗಳು ಬಹಳ ನೆನಪಿಗೆ ಬರುತ್ತದೆ, ಅವಳ ಮುದುವೆಯಾದ ನಂತರದ ಬದುಕಿನ ಹೋರಾಟ, ಎಲ್ಲರ ಜೊತೆ ಬದುಕುವ ಅನಿವಾರ್ಯ, ನಗುತ ಎಲ್ಲರ ಮುಂದೆ ಇದ್ದು ದುಃಖವ ಮುಚ್ಚಿಡುವ ಪರಿ ಎಲ್ಲ ನೆನಪಿಗೆ ಬರುತ್ತದೆ. 

ಅಮ್ಮ ನನ್ನ ಉಸಿರು, ದೇವತೆ,ಹರುಷ ಎಂದೆಲ್ಲಾ ಬಹಳಷ್ಟು ಹಾಡುಗಳಿವೆ. ಆದರೂ ಆಕೆಯ ನೆಚ್ಚಿನ ಹಾಡು Dr. Puneet ರವರ " ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು  ತಾನೇ " ಆ ಹಾಡು ಎಷ್ಟೋ ಬಾರಿ ಮನಸಿನ ಹಾಗು ಮೆದುಳಿನ ಕೊನೆಯಲ್ಲಿ ಇಣುಕಿ ಸಣ್ಣ ಹನಿಯೊಂದನ್ನು ಹರಿಬಿಡುತ್ತದೆ.

ಅಮ್ಮ ನೀನು ಕಲಿಸದ ಹಾದಿ, ನಿನ್ನ ನೋಡಿ ಕಲಿತ ಪಾಠ, ನನ್ನ ಜೀವನದ ಅಂಗ, ನೀ ನನ್ನ ಉಸಿರಿಗೆ ಕಾರಣ. ಆದರೂ ನಾ ನಿನ್ನ ಕೊನೆ ಸಾರಿ ನೋಡಲಿಲ್ಲವೆಂಬ ದುಃಖ, ಯಾವ ತೀರ್ಥದಲ್ಲಿ ಮುಳಿಗಿದರೂ , ಯಾವ ದರ್ಶನ ಮಾಡಿದರೂ ತಣಿಯುತಿಲ್ಲ. 

ಅಮ್ಮ, ನೀ ಎನ್ನ ಭಾಗ್ಯ ದೇವತೆ, ಮುಂದಿನ ನನ್ನ ಎಲ್ಲಾ ಜನ್ಮಗಳಿಗೂ  ನೀ ಎನ್ನ ತಾಯಿ.

(ನನ್ನ ಗದ್ಗದಿತ  ಕಂಠ, ಕಣ್ಣೀರ ಹನಿಯನ್ನು ನೋಡುತ್ತಾ ಮುದ್ದಾಗಿ  ನಿಂತ ನನ್ನ ಮುದ್ದು ಮಕ್ಕಳು, ಅವರಿಗೆ ತಾಯಿ ತಂದೆಯ ಸೌಭಾಗ್ಯ ಎಂದಿಗೂ ಇರಲಿ, ನಾನು ಕಲಿತದ್ದನ್ನು ನನ್ನ ಮಕ್ಕಳಿಗೂ ಕಲಿಸುವ ಶಕ್ತಿ ಆ ಕೃಷ್ಣ ನನಗೆ ದಯಪಾಲಿಸಲಿ).

Happy Mother's day. 

Tuesday, March 17, 2026

ಸಣ್ಣದೊಂದು ಮಳೆಯಾಯ್ತು ನಮ್ಮೂರಿನಲಿ

 ಕಾದು  ಬೆಂದ  ಧರಣಿಯ  ದಾಹ 

ನೀಗಿಸಲು ,

ಸಣ್ಣದೊಂದು ಮಳೆಯಾಯ್ತು ನಮ್ಮೂರಿನಲಿ ।।


ಹಸಿರ ಬಸಿರ ಉಸಿರ ನೀಡಲು, ಕಾಯುತಿರುವ 

ಧರೆಯ ತಂಪಾಗಿಸಲು,

ಸಣ್ಣದೊಂದು ಮಳೆಯಾಯ್ತು ನಮ್ಮೂರಿನಲಿ ।।


ಧೂಳಿನ ಕಣದ ನಡುವಿನಲಿ, ಹನಿಯ ಇರುವಿಕೆ 

ತೋರಲು ,

ಸಣ್ಣದೊಂದು ಮಳೆಯಾಯ್ತು ನಮ್ಮೂರಿನಲಿ ।।


ಮೂಲೆಯಲಿ ಉಳಿದ ಛತ್ರಿಗಳು, ಬಿಸಿಲ ಕಂಡ

ಕೊಡೆಗಳ ನಲಿವಿಗೆ ,

ಸಣ್ಣದೊಂದು ಮಳೆಯಾಯ್ತು ನಮ್ಮೂರಿನಲಿ ।।


ಕಾಗದದ ದೋಣಿಯ ನೆನಪು ತರಿಸಲು,

ನೆನಪಿನ ಬುತ್ತಿಯ ಚಿತ್ರ ಬಿಡಿಸಲು,

ಸಣ್ಣದೊಂದು ಮಳೆಯಾಯ್ತು ನಮ್ಮೂರಿನಲಿ ।।


ಮನಸಿನ ನೋವಿನ ಮರೆಯಲಿ, ನಗುವಿನ 

ಆಗಮನ ಅಚಾನಕ್ ಎಂದು,

ಸಣ್ಣದೊಂದು ಮಳೆಯಾಯ್ತು ನಮ್ಮೂರಿನಲಿ ।।


ಚಿಗುರಿನ ತೆನೆಯ ನಡುವೆ, ಸೂರ್ಯನ ಕಿರಣಗಳ 

ಚೆಲ್ಲಲು, ಮುಗಿಲ ಅಂಚಿನ ಮರೆಯಲಿ ,

ಸಣ್ಣದೊಂದು ಮಳೆಯಾಯ್ತು ನಮ್ಮೂರಿನಲಿ ।।


ಯುಗ ಯುಗ ಕಳೆದರೂ, ನವ ವರುಷದ ರಂಗೋಲಿಯ 

ಚಿತ್ತಾರ ಬಿಡಿಸುವೆನೆಂದು, 

ಯುಗಾದಿಯ ಮಳೆಯಾಯ್ತು ನಮ್ಮೂರಿನಲಿ।।

Creative Commons Licence
This work is licensed under a Creative Commons Attribution-ShareAlike 3.0 Unported License.