Tuesday, September 10, 2019

ನೀ ಮೌನಿಯಾದರೆ

ನೀ ಹೀಗೆ ಮೌನಿಯಾದರೆ,
ಆಗಸದಿ ಮೋಡ ರವಿಯ ಮುಸುಕಿದಂತೆ !
ನೀ ಹೀಗೆ ಮುನಿದರೆ,
ಮನದಲ್ಲಿ ಭಾವನೆ ಹುದುಗಿಹೋದಂತೆ !
ನೀ ನಿನ್ನಲ್ಲೇ ಕಳೆದುಹೋದರೆ,
ನಾ ನಿನ್ನಿಂದ ದೂರಾದಂತೆ !

ಲೋಕದ ಪ್ರತಿ ಭಾಷೆಗೆ ತನ್ನದೇ ಪದಗಳು 
ಆದರೆ ನೀ ಉಲಿಯದ ಮಾತಿಗಿದೆ ಹೊಸ ಅರ್ಥಗಳು
ದೂರ ಉಳಿದೆ ಹೊಸ ಬೇಲಿಯನೇರಿಸಿ 
ಮಾತಿರದ ಬಂಧನದ ಸೆರೆಮನೆಗೆ ನನ್ನ ಸೇರಿಸಿ 

ನಿನ್ನ ನಗೆಯ ತೋರಣ ನನ್ನ ಮನದ ದ್ವಾರಕ್ಕಿರಲಿ 
ನಿನ್ನ ಮಾತಿನ ಒಗ್ಗರಣೆ ನನ್ನ ಬದುಕಿನ ಸಾರವಾಗಿರಲಿ 
ನಿನ್ನ ಪ್ರತಿ ಹೆಜ್ಜೆ ನನ್ನ ನಡೆಸುವ ಧೈರ್ಯವಾಗಿರಲಿ 
ನಿನ್ನ ಎಲ್ಲಾ ನೋವು ನನ್ನ ಪಾಲಿನದಾಗಲಿ 

ಕಳೆದು ಹೋಗದಿರು ನಿನ್ನದೇ ಲೋಕದಲಿ 
ನನ್ನ ನೆರಳನು ಹುಡುಕುತಿರು ನಿನ್ನ ನಡಿಗೆಯಲಿ 
ಪ್ರೇಮದ ಕಡಲಿನಲಿ ನಮ್ಮ ಪಯಣವಿರಲಿ 
ಆ ಪಯಣದ ಅಂತ್ಯ ಎಂದಿಗೂ ಆಗದಿರಲಿ 



 

Tuesday, August 20, 2019

ನಗೆಯ ಛಾಪು

ಬಣ್ಣಗಳ ಕನಸು, ರವಿಯ ಹೊಸ ಕಿರಣ
ವಿನೂತನ ದಿನ, ಆದರೆ ಅದೇ ಹಳೆ ಪುರಾಣ
ಕಾರಣಗಳ ಸಂತೆ,  ಮುಗಿಯದ ಅಂತೆ ಕಂತೆ
ಆದರೂ ದೇವರು ಮೊಳಗಿಸುವ ಒಮ್ಮೊಮ್ಮೆ ಸಂತಸದ ಗಂಟೆ

ಬಯಸುವ ನವೀನ ಬದುಕು
ಅದರ ಒಳಗೆ ನೋವಿನ ತುಣುಕು
ಕಷ್ಟ ಸುಖಗಳ ತುಂಬು ಸರುಕು
ಅದಲ್ಲ ನೆರಳಿನ ಅಣುಕು

ಬದುಕಿದು ಜಟಕಾ ಬಂಡಿ ಅಲ್ಲಲ್ಲಿ ನೋವಿನ ಗುಂಡಿ
ಒಮ್ಮೆ ನಲಿವು ಒಮ್ಮೆ ಒಲವಿನ ಹುಂಡಿ
ದುಃಖದ ಬ್ರಹ್ಮಾಸ್ತ್ರ ಆದರೆ ರಣ ಚಂಡಿ
ಮನಸು ಕಶ್ಮಲ ಆಗಿ ಅಲ್ಲಿ ಬಂದಿ

ಮನ ಒಮ್ಮೊಮ್ಮೆ ಬಯಸುವುದು ಏಕಾಂತ
ಅಲ್ಲಿಯೂ ಸುಳಿವುದು ಜೀವನದ ವೃತ್ತಾಂತ
ಬಯಸುವುದು ಆಗಲು ಸಂತ
ಆದರೆ ಅದೇನಾ ಜೀವನದ ಅಂತ

ಪ್ರತಿ ಸೋಲಿಗೂ, ಗೆಲುವಿನ ಜೊತೆ
ಎಲ್ಲ ನೋವಿನೊಂದಿಗಿದೆ  ಸಂತಸದ ಕಥೆ
ಮನಸಲ್ಲಿ ಮಾಸದಿರಲಿ ನಗೆಯ ಛಾಪು
ಮೂಡಿಸುತಿರಲಿ ಒಲವಿನ ರೂಪು
















Friday, August 9, 2019

ಹಿಮದ ಪರ್ವತ

ಕಣ್ಣು ನೋಡಿದಷ್ಟು ದೂರ
ಮನವ ಸೆಳೆವ ಆ ಪರ್ವತಗಳ ಆಕಾರ
ಹಸಿರು ಹೊದಿಗೆಯ ಮೇಲೆ ಬಿಳಿ ಶಿರ
ಆ ಪ್ರಕೃತಿಯ ಮುಂದೆ ನಮ್ಮ ಜೀವನ ನಿರಾಕಾರ
ಆ ಸೌಂದರ್ಯದ ಕರ್ತೃಗೆ ದೀರ್ಘದಂಡ ನಮಸ್ಕಾರ

ಆಕಾಶದ ಎತ್ತರಕೆ ಬೆಟ್ಟಗಳ ಸೆಣಸಾಟ
ಒಮ್ಮೆ ಬೆಳಕು ಒಮ್ಮೆ ನೆರಳಿನ ಆಟ
ಮುಗಿಲಿನ ನಡುವೆ ರವಿಯ ಕಿರುನೋಟ
ಹಿಮದ ಮಣಿಗಳ ಸುಂದರ ಮುಕುಟ

ಸುರಿವ ಹಿಮದ ನಡುವೆ ನಮ್ಮ ಪಯಣ
ನಡೆದಾಡಿದ ಕಡೆಯಲ್ಲೆಲ್ಲಾ ನಮ್ಮ ಹೆಜ್ಜೆಯ ಬಣ್ಣ
ಈ ಭುವಿಯಲ್ಲಿ ಈ ತರ ಅದೆಷ್ಟೋ ತಾಣ
ಮಾನವನಿಗೆ ತಿಳಿಸಿಕೊಡುವುದು ಅವನ ಸ್ಥಾನ

ಬೆಳಕಲಿ ಕಾಣುವ ಈ ಬೆರಗು ಪರಿಸರ
ಕತ್ತಲಲಿ ಕಾಣುವುದು ಅತಿ ಭಯಂಕರ
ಉಳಿಸಿ ಬೆಳಸಿ ನಮ್ಮ ಭೂಮಿಯ ನಿರಂತರ
ನಮ್ಮ ಜೀವನವಾಗುವುದು ಆಗ ಸಾಕಾರ












Tuesday, July 2, 2019

ಮುಗ್ದ ಮನಸು

ಸಣ್ಣ ನಗೆಯ ಮಿಂಚು, ಮನದ ಸಣ್ಣ ಸಂಚು
ಎಲ್ಲಿ ಮನೆಯ ಮಾಡಿತ್ತು,
ನಿನ್ನ ಅರಿತ ಆ ಮುಗ್ದ ಮನಸು, ಅದರ ಎಲ್ಲಾ ಕನಸು
ಒಟ್ಟಾಗಿ ನೀನು ಹೆಕ್ಕಿ ತರುತಿರುವೆ

ತಂದೆ ನೀನು ಒಲವ ನೆನಪು
ಮರೆತ ಜೀವನದ ಸಣ್ಣ ತುಣುಕು

ಮೌನದಿಂದಲೇ ಅರಿತ ನಿನ್ನ ಗುಣಗಳನು
ಇಂದು ನಿನ್ನ ಸಂದೇಶಗಳಲ್ಲಿ ಹುಡುಕುತ್ತಿದ್ದೆ 
ಅಂದಿನ ದಿನಗಳ ನಿನ್ನ ಮುಗ್ಧ ನುಡಿಗಳೆ 
ಇಂದು ನಿನ್ನ ಮಾತುಗಳಲ್ಲಿ ನಲಿದಾಡುತಿದೆ

ದಿನವ  ಆರಂಭಿಸಿದೆ ನಿನ್ನ ನೆನಪಲ್ಲಿ
ಹೃದಯದ ಆ ಸಣ್ಣ ಬಡಿತದ ಏರುಪೇರಲ್ಲಿ
ನಿನ್ನ ಒಮ್ಮೆ ನೋಡಿ ಮಾತನಾಡುವಾಸೆ
ಆ ಹಳೆಯ ದಿನಗಳ ನೆನೆಯುವಾಸೆ

ಜೀವನದ ಈ ಎಲ್ಲಾ ಕದನಗಳಲಿ
ಗಟ್ಟಿಯಾಗಿ ನೀ  ನಿಂತೆ ಮನದ ಮೂಲೆಯಲಿ
ಆದರೆ ಮರಳಿ ಬಾರದು ಆ ದಿನಗಳೆಂದು
ನೆನಪನು ಮಾಡುತಿರುವ ಉದಯ ಸಿಂಧು





ಒಲವ ರಂಗು


ಏನಿದು ಹೊಸ ರಂಗು ಎಲ್ಲೆಲ್ಲೂ,
ಏನಿದು ಹೊಸ ಗುಂಗು ಮನಸಲ್ಲೂ,
ಏನೋ ಹೇಳದ ಹೊಸ ಸಂತಸ ಕಣ್ಣಲ್ಲೂ,
ಪ್ರೀತಿಯ ಕರುಣೆ ಇರಬಹುದೇನೋ ಇದು ..

ನನ್ನ ಒಲವಿನ ರೂಪ ನೀನಾಗಲು ನಿನ್ನ ಒಲವು ನಾನಾಗುವೆ
ನನ್ನ ಕಣ್ಣಿನ ಬಿಂಬ ನೀನಾಗಲು ನಿನ್ನ ನೆರಳು ನಾನಾಗುವೆ।।

ದೂರವಾಗಿ ನೀ ಇರಲು, ನೆನಪಲ್ಲೇ  ನಲಿದಾಡುವೆ
ಹಾಡನ್ನು ನಾ ಹಾಡಲು, ಹೊಸ ರಾಗವಾಗಿ  ಮೂಡುವೆ
ಹೀಗೆ ಪ್ರತಿ ಗಳಿಗೆ ನನ್ನ ನೀ ಸೋಲಿಸಿ ಗೆದ್ದು ನಗುತಿರುವೆ
ಕರೆಯುತಿರುವೆ ನೀ ನನ್ನ ಪ್ರೇಮ ರಂಗದಲ್ಲಿ
ಸೋಲಲು ಬಯಸಿರುವೆ ನಾ ಈಗ ಅದರಲ್ಲಿ
ನಿನ್ನ ಅನುಕರಣೆಯೆ ದಿನಚರಿಯಾಗಿ ಮಾಡಿದೆ

ನನ್ನ ಒಲವಿನ ರೂಪ ನೀನಾಗಲು ನಿನ್ನ ಒಲವು ನಾನಾಗುವೆ
ನನ್ನ ಕಣ್ಣಿನ ಬಿಂಬ ನೀನಾಗಲು ನಿನ್ನ ನೆರಳು ನಾನಾಗುವೆ।।

ಹೀಗೆ ನಾ ಬಂದಿಯಾಗಿರುವೆ  ನಿನ್ನ ತೋಳಲ್ಲಿ
ನೀ ಪ್ರತಿ ಕ್ಷಣ ನೆನಯುತಿರು ನನ್ನಾ ಮನಸಲ್ಲಿ
ಈ ಯುಗದ ಹೊಸ ಲಿಪಿ ನೀ ಮೂಡಿಸು
ನಮ್ಮಿಬ್ಬರ ಹೆಸರನ್ನು ನೀ ಈಗ  ಜೋಡಿಸು
ಅದರಲ್ಲಿ ನಾವು ಬೇರೆಯಾಗದ ಬಂಧನವ ಬೆರೆಸು

ನಾ ನಿನ್ನ ಧರತಿಯಂತೆ ನೀ ನನ್ನ ರವಿ
ಈ ಧರತಿಯ ತಾವರೆ ನಾನಾದರೆ ನೀನಾದೆ ತೊರೆ
ಕೈಹಿಡಿದು ನೀ ನಡೆವೆಯಾ ಆ ಸಪ್ತ ಪದಿ
ನವಿರಾದ ಒಲವ ಗೀತೆ ಹಾಡುವೆಯಾ ಪ್ರತಿ ಸಾರಿ
ದೂರಾಗಿ ಹೋದರು ಕನಸ ಕಾಣುವೆ
ಜೀವನವ ತುಂಬುವೆ ನಿನ್ನ ಗುಂಗಲ್ಲಿ 

ನನ್ನ ಒಲವಿನ ರೂಪ ನೀನಾಗಲು ನಿನ್ನ ಒಲವು ನಾನಾಗುವೆ
ನನ್ನ ಕಣ್ಣಿನ ಬಿಂಬ ನೀನಾಗಲು ನಿನ್ನ ನೆರಳು ನಾನಾಗುವೆ।।










Friday, June 28, 2019

ಸ್ನೇಹ ಮಿಲನ

ಬಂತೊಂದು ಹೊಸ ಸುದ್ದಿ ಈಗ ತಾನೆ
ತಂದಿತೊಂದು ನಗೆಯ ಹಬ್ಬ ತಂತಾನೆ
ಸಿಕ್ಕಿತಲ್ಲಿ ಕಳೆದುಕೊಂಡ ನೆನಪೊಂದು
ಕೂಡಿಸುತಾ ಬಂಧನದ ಕಂಪೊಂದು

ಸ್ನೇಹದ ಅಲೆಗಳ ಏರಿಳಿತ
ಅಲ್ಲಿ ಪ್ರೀತಿಯ ನವಿರಾದ ತಕಧಿಮಿತ
ಪ್ರತಿ ಪದಗಳಲಿ ಆ ದಿನಗಳ ಮಾತು
ಅದು ನಮ್ಮ ಆ ದೋಸ್ತಿಯ ಗಮ್ಮತ್ತು

ಹೆಚ್ಚುತಲಿದೆ ನಮ್ಮ ಗೆಳೆಯರ ಬಳಗ
ಆಗಾಗ ಅಲ್ಲಿ ಇರಬಹುದೇನೋ ಸಣ್ಣ ಕಾಳಗ
ಹೀಗೆ ಜೊತೆಯಿರಲಿ ನಮ್ಮ ಬಂಧನ
ಸ್ನೇಹ ಸಿಹಿಯ ಸವಿಯುತಲಿರಲಿ ನಮ್ಮ ಜೀವನ

ಬಂಧನಗಳ ಸೇತುವೆ ಬೆಸೆಯುತಿದೆ ಮನದಲ್ಲಿ
ನೆನಪುಗಳ ಹೆಕ್ಕಿ ಹುಡುಕುತಿದೆ ಮನ ಅಲ್ಲಿ
ಸರಿ ತಪ್ಪುಗಳ ಲೆಕ್ಕವಿಲ್ಲ, ಅದು ಸ್ನೇಹ ಕಲರವ
ಬಲ್ಲವನೇ ಬಲ್ಲ ಈ ನವಿರಾದ ಅನುಭವ





Creative Commons Licence
This work is licensed under a Creative Commons Attribution-ShareAlike 3.0 Unported License.