Tuesday, October 27, 2015

ಮನವೇ

ಓ ಮನವೇ ... ಓ ಮನವೇ ...
ಓ ಮುದ್ದು ಮನವೆ... ಮುಗ್ಧ ಮನವೆ...
ಅರಿವ ತಿಳಿಯದ ಸುಪ್ತ ಮನವೇ ...
ಏಕೆ ಹುದುಗಿಸಿರುವೆ ಅತೃಪ್ತಿ ಕನಸು..
ಭಯದ ಸುಳಿಯಲಿ ಏಕೆ ಸಿಲುಕಿರುವೆ...

ರಾತ್ರಿಯ ನಿರ್ಮಲ ಆಕಾಶ ಶಾಂತ ಈ ಭೂಮಿಯಲಿ
ನಿನ್ನ ಬಯಕೆ ಏನು? ಏಕೆ ನಿನಗೆ ಈ ಅಶಾಂತಿ ...
ಕದಿಯದಿರು ನಿನ್ನ ಈ ದಿನಗಳನು ...
ಸಿಹಿಯ ಸ್ನೇಹದ ಹಸ್ತಕೆ ನಿನ್ನ ಮುಗುಳ್ನಗು ಕೊಡು ...

ಜೊತೆ ನಡೆವ ಪ್ರತಿ ಹೆಜ್ಜೆಗೆ ಸಂತಸವ ಹಂಚು ..
ಬೆಳಕಿನ ಕಡೆ ನಡೆಯಲು ದಾರಿಯ ನೀಡು
ಹೆಣೆಯದಿರು ನಿನ್ನದೇ ಹುಚ್ಚು ಬೇಲಿ
ನಿನ್ನ ನೀನು ಬಚ್ಚಿಟ್ಟು ಮರೆತು ಹೋದೆ ನಿನ್ನಯ ಇರುವಿಕೆಯ
ಚಾವಣಿ ಗೋಡೆ ಇರದ ಮನೆಯೊಳಗೆ ಇದ್ದು, ಮನದ ಕಿಟಕಿಯ ತೆರೆದು
ಸೇರಿಸಿಕೋ ನಿನ್ನ ನೀನು ಈ ಲೋಕದೊಳಗೆ

ಬಾರೆಯ ನನ್ನೊಡನೆ ಓ ... ಈ ಅವಾನಿಗೆ ಆಗುವ ನಾವು ಚೇತನ
ಹರಿಸುವ ಸ್ನೇಹ ಪ್ರೇಮದ ಓಕುಳಿಯ ..



Monday, October 12, 2015

ಸ್ನೇಹದ ಕಂಕಣ

ಸ್ನೇಹದ ಸಪ್ತಸ್ವರಗಳ ನುಡಿಸಿದ ಜೀವನ
ಹೆಜ್ಜೆಗಳಿಗೆ ಹೊಸತನವ ನೀಡಿದ ಚೇತನ
ಬಣ್ಣಗಳ ಲೋಕದಲ್ಲಿ ತೇಲಿದ ಮನ
ಪ್ರೀತಿಗೆ ಪ್ರೀತಿಯ ಬೆರೆಸಿದ ಸ್ನೇಹದ ಆ ಕ್ಷ್ಣಣ

ಆ ನಮ್ಮ ಸ್ನೇಹದ ಮಧುರ ಕ್ಷಣಗಳು
ಮೂಡಿಸಿದವು ಬಹಳ ಕನಸುಗಳು
ಸ್ನೇಹದ ಬಂಧನವ ಗಟ್ಟಿಗೊಳಿಸಿತದು
ಒಂದಾಗಿರಬೇಕೆಂದು ತೊಟ್ಟ ಸ್ನೇಹ ಕಂಕಣವದು

ರೆಕ್ಕೆಗಳ ತೊಟ್ಟು ಹಾರಿದ ಕ್ಷಣ
ಕವಲುಗಳ ತೊಡೆದು ಬಂಧನವ ಬಿಡಿಸಿತು
ಮುಗ್ದತೆಗೆ ಮೈಲಿಗಲ್ಲು ಆ ಸಂಬಂಧ
ಭಾವನೆಗಳ ರಂಗೋಲಿಗಳ ಮೂಡಿಸಿತು

ಮಳೆಯಲ್ಲಿ ಮಿಂದ ಆ ದಿನಗಳು, ನೋವಿಗೆ ಸ್ಪಂದಿಸಿದ ಆ ಕೈಗಳು
ಜೊತೆ ನಡೆದ ಆ ಹೆಜ್ಜೆಗಳು, ತಪ್ಪನ್ನು ತಿದ್ದಿದ ಆ ಕೈಗಳು
ಅಳತೆ ಸಿಗುವುದೇ ಆ ಸ್ನೇಹಕೆ ... ಎಲ್ಲಾ ಬಂಧದ ಎಲ್ಲೆಯ ಮೀರಿದ ಆಗಸವದು
ಹರುಷದ ಸಾಗರದ ಅಲೆ ಈ ಅನುಬಂಧ ... ಸುಂದರ ಸ್ನೇಹವಿದು

Wednesday, July 29, 2015

ಪ್ರೇಮದಾ ನೆಲೆ

ರೆಕ್ಕೆ ಇರದ ಕನಸುಗಳನು ನನ್ನಲ್ಲಿ ಕಂಡೆ ನಾನು
ರೆಕ್ಕೆಗಳಿಗೆ ಜೀವ ತುಂಬಿ ನನ್ನಡಿಗೆ ಇಟ್ಟೆ ನೀನು
ಕಣ್ಣಿನಲ್ಲಿ ಇದ್ದ ಭಯವ ದೂರ ಮಾಡಿ ನಿಂತೆ ನೀನು
ಹಸ್ತ ಚಾಚಿ ಸೆಳೆದೆ ಬಳಿಗೆ.. ಕಳೆದು ಹೋದೆ ಅಲ್ಲೇ ನಾನು ...

ನನ್ನೊಳಗೆ ಮೂಡಿದಂತ ಪ್ರೇಮದಾ ಚಿಲುಮೆ
ತರಂಗಳ ಮೂಡಿಸುತ ನೀ ನಲಿಯುತಲಿರುವೆ
ಬಣ್ಣಗಳ ಲೋಕವನ್ನು ನೀ ಇಲ್ಲಿ ನೇಯ್ದು
ತಣಿಸಿತಲಿರುವೆ ನನ್ನೀ ಜೀವನವನ್ನೇ

ಕಣ್ಣಿನೊಳಗೆ ಕಣ್ಣ ಬೆಳಕಾಗಿ ರಾಗದೊಳಗೆ ರಾಗದ ಸ್ವರವಾಗಿ
ಸಣ್ಣದೊಂದು ಮನದ ಈ ಹಂಬಲಕೆ ಹಚ್ಚಿರುವೆ ಆಸೆಯ ಹೊಸ ಹಣತೆ
ಆ ಬೆಳಕಿನ ಹೊಂಗಿರಣ ತುಂಬಿದೆ ನೋಡು ನನ್ನ ಆವರಣ
ಚೆಂದದ ಈ ಪ್ರೇಮ ಪರಧಿ ಆವರಿಸಿದೆ ನನ್ನ ಹೊಸಾ ತರದಿ...
ನೀ ಇರಲು ಹೀಗೆ ನನ್ನೊಳಗೆ ಅತಿಯಾಗಿ
ನಾ ಕಳೆದು ಹೋಗುವೆ ನಿನ್ನೊಳಗೆ ನಾನಾಗಿ ....

ನಮ್ಮ ಮೇಲೆ ಪ್ರೇಮದಾ ನೆಲೆಯಿರಲು, ಇನ್ನೆಲ್ಲಿದೆ ನೋವಿನಾ ಕಡಲು
ಹೆಜ್ಜೆಯ ಜೊತೆ ಹೆಜ್ಜೆಗಳ ಸಂಗಮ, ಅಲ್ಲಾಗಿದೆ ಈ ಪ್ರೀತಿ ಸಮಾಗಮ
ಕನಸಲ್ಲಿದೆ ನೂರಾರು ಬಿತ್ತಿ ಕವನಗಳು .. ತುಂಬುತಲಿರುವೆ ರಾಗವ ನೀ ಅಲ್ಲೂ ...
ಈ ಸ್ನೇಹ ಈ ಪ್ರೇಮದ ಅಂದ
ಜೀವನದ ಎಲ್ಲಾ ಕದಗಳನು ಮಾಡಿದೆ ಚೆಂದ

Thursday, June 18, 2015

ಒಲವಿನ ಕರೆ

ಪ್ರೀತಿಯ ಕರೆ ಯಾವಾಗ ಬರುವುದೋ
ಪ್ರೀತಿ ನಿನ್ನ ಕಣ್ಣಲಿ ಯಾವಾಗ ಕಾಣುವುದೋ
ಕಣ್ಣ ರೆಪ್ಪೆಯ ಒಳಗಿನ ಕನಸು ನಾ ಯಾವಾಗ ಆಗುವೆನೋ?
ತುಟಿಯ ಮೇಲಿನ ಆ ಕಿರುನಗೆ ನಾನೇನೋ?

ದಾರಿಯ ಕಾಣುತ ಕುಳಿತಿರುವೆ ನಾ ಇಲ್ಲಿ
ಒಲವ ಹುಡುಕುತ ಅಲಿಯುತಿರುವೆ ನೀ ಅಲ್ಲಿ
ಹಾದಿಯ ಮರೆತು ಕಳೆದು ಹೋದೆವೆಲ್ಲೋ
ಸುತ್ತಲಿನ ಪರಿಸರ ನಮ್ಮನ್ನು ಮಾಯವಾಗಿಸಿಹುದೆಲ್ಲೋ

ಕೇಳಲಾರೆ ನಿನ್ನ ನಾ ಎಂದೂ ಪ್ರೀತಿಸೆಂದು
ಭಾವನೆಗಳ ಹುದುಗಿಸಲಾರೆ ಎಂದೂ
ಕವನಗಳ ಬರೆದು ಅರ್ಪಿಸುವೆ  ನಿನಗಿಂದು
ನೀ ತಾನೆ ನನ್ನೆಲ್ಲಾ ಬಂಧು

ತಂಪಿನ ಗಾಳಿಯ ಸಣ್ಣ ಹನಿಯಾಗಿ ಮೂಡುವೆ
ಏನೇ ಬದಲಾದರೂ ನನ್ನ ಅನ್ವೇಷಣೆ ನೀ ತಾನೆ
ದಾರಿಯು ಬದಲಾದರೂ ನಿನ್ನ ಸೇರಲು ಹುಡುಕುವೆ
ಈ ನದಿಯ ಸಾಗರ ನೀ ತಾನೆ ...

ನನ್ನಲ್ಲಿ ಇರೋ ಈ ಪ್ರೇಮದ ಒಡೆಯ
ಹುಡುಕಿ ಬಾ ನನ್ನ ಪ್ರೇಮವ
ಒಲವಿನ ಕರೆಯ ಅರಸಿ ಬಾ...

Creative Commons Licence
This work is licensed under a Creative Commons Attribution-ShareAlike 3.0 Unported License.