Monday, April 30, 2012

ಪ್ರೇಮಿ

ಮಾಯಾ ಲೋಕದ ದಿಟ್ಟ ನಾವಿಕ, ಹೃದಯ ನೀಡುವೆ ಸ್ವೀಕರಿಸೆಯಾ?
ಭವ್ಯ ಲೋಕದ ದೀರ್ಘ ಪಯಣಕೆ ಅಣತಿಯನು ನೀ ಕೊಡುವೆಯಾ?
ಈಗಂತೂ ನಿನ್ನಲಿ ನಾ ನಿನ್ನಲಿ ಇರುವೆನು, ಮಾತಲ್ಲೇ ಮರೆಯುತಾ ನಾ ಮರೆಯುತಾ ಕುಣಿವೆನು !!!


ಕಂಡೆನು ಪಯಣದಿ ಮನದ ಅಂತರ್ಯವನ್ನು,  ಸುಂದರ ಮನಸಿನ ಒಬ್ಬ ಪ್ರೇಮಿಕನನ್ನು
ಕಳೆದು ಹೋದೆ ನೋಡಲ್ಲಿ ನಿನ್ನ ಪ್ರೇಮ ಧ್ಯಾನದಿ, ಸುಂದರ ಸ್ವಪ್ನ ತಂದ ಆ ಕ್ಷಣದಲಿ
ನನ್ನನೇ ....... ನಾ ಈಗ ಮರೆತನು

ಹೂವಿನ ಬನದಲಿ ಬಣ್ಣದ ಚಿತ್ರ ನೀನು, ರಂಗನು ತುಂಬುವ ನಾ ಹೊನ್ನಿನ ಕುಂಚವೇನು?
ಒಲಿವಿನ ಈ ಲೋಕದಲ್ಲಿ ಕಣ್ಣಿನಂತೆ ನೀನು, ನಿನ್ನ ಕಣ್ಣ ಕಾಯುವ ರೆಪ್ಪೆ ನಾನು,
ಹಿಡಿದಿರು....  ನನ್ನ ಈ ಕೈಯನು!!!


ಇಡುತ ನೀ ಹೆಜ್ಜೆಯ ಬಂದೆ ಹೃದಯದ ಬೀದಿಗೆ, ನೀಡುತ ಭಾಷೆಯ ನನ್ನ ಭಾವನೆಗಳಿಗೆ
ತಿಳಿಯದೆ ನಾ ಹೋದೆ ಪ್ರೀತಿಯ ಈ ಜಾಡನು, ಹುಡುಕುತ್ತಲೇ ಇರುವೆ ನಿನ್ನ ಕನಸನು
ಅನುಮತಿ ......ನೀ ಈಗ ಕೊಡುವೆಯಾ?

 " In tunes of song Yava seemeya - Johny mera naam movie"

Thursday, April 19, 2012

ನೆನಪು

ನೆನೆದು ನೆನೆದು ಅಳಿದೆ
ನಿನ್ನ ಬದುಕಲಿ ನಾನು ನಿನ್ನವಳಾಗಿ ಜೀವಿಸಿದೆ 
ತೋಳಲಿ ಸೇರಿ ಕಳೆದು ಹೋದೆ 
ನಿನಗಾಗಿ ಉಸಿರ ಹಿಡಿದು ಬದುಕಿದೆ !!!!

ಆಡಿ ಹೋದ ಮಾತುಗಳೆಲ್ಲಾ ಗಾಳಿಯಲ್ಲೆ ತೇಲಿದಂತಿದೆ
ಬಯಸಿ ಪಡೆದ ಆ ಆಣೆಗಳೆಲ್ಲಾ ಸಮಯದ ಬಂಧಿಯಾಗಿದೆ
ನೀ ಇಲ್ಲದೆ ನನ್ನ ಅಸ್ತಿತ್ವ ಮರೆತಂತಿದೆ 
ಒಮ್ಮೆ ನುಡಿಯಲಾರೆದೆ ಹೋದೆ ಏಕೆ?

ಸುತ್ತಮುತ್ತ ಬರೀ ಮೌನದ ಗೋಡೆಯಾಗಿದೆ
ದಾಟಲು ಆಗದ ನೋವಿನ ಬೇಲಿ ಸುತ್ತಿದಂತಿದೆ 
ಉತ್ತರ ಸಿಗದ ಈ  ಮೌನಕೆ ಪ್ರಶ್ನೆಯು ಇಲ್ಲವಾಗಿದೆ 
ಊಹಿಸದ ಲೋಕಕೆ ನನಗೆ ಆಮಂತ್ರಣ ಸಿಕ್ಕಿದೆ!!!!!

ಇರದೇ ಇದ್ದಂತಿದೆ, ಪಡೆದು ಕಳೆದಂತಿದೆ 
ಹಿಡದ ಕೈ ನೆರಳಂತಿದೆ
ಬೆಳಕೇ ಇಲ್ಲದೆ ಕಂಡ ಕತ್ತಲಂತಿದೆ 
ನಂಬಲಾಗದ ಸತ್ಯ ಇದೇ ಏನು?

 

Thursday, April 5, 2012

ಪುಟ್ಟು ಹುಡುಗ

ಸಮಾಜದ ಪ್ರತಿ ವ್ಯಕ್ತಿಯು ತನ್ನದೇ ಪುಟ್ಟ ಪ್ರಪಂಚದ ಮಾಲಿಕ, ದಿನದ ಆಗು ಹೋಗುಗಳ ನಡುವೆ ಯಾವ ರೀತಿಯಲ್ಲಿ ಬದುಕುವನೋ ತಿಳಿಯದು, ಆದರೆ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಮಹಾತ್ಮರು ಇದ್ದಾರೆ, ಅವರು ರೂಪಿಸಿದ ಆ ರೂಪುರೆಕೆಗಳು ಸಮಾಜಕ್ಕೆ ಪೂರಕ.

ಸಮಾಜದಲ್ಲಿ ಬದುಕುವ ನಮಲ್ಲಿ ಎಷ್ಟೋ ಮಂದಿ ಮನುಷತ್ವವನ್ನು ಎಷ್ಟರ ಮಟ್ಟಿಗೆ ಮರೆತಿರಬಹುದು ಎಂದಾದರೂ ಯೋಚಿಸಿದ್ದೀರಾ? ನಾವು ಪ್ರತಿ ದಿನ ನಡೆದಾಡುವ ರಸ್ತೆಯ ಬದಿಗಳಲ್ಲಿ ಎಷ್ಟೋ ಮಂದಿ ಭಿಕ್ಷೆ ಬೇಡುವ ಮಕ್ಕಳು, ಅವರ ಹರಿದ ಅಂಗಿಗಳು ಕೆದರಿದ ಕೂದಲು, ಕಣ್ಣಿರಿನ ಬಾವಿಗಳಾದ ಕಣ್ಣುಗಳು, ಸುಂದರ ಭವಿಷ್ಯದಿಂದ ವಂಚಿತರು, ಇದರ ನಡುವೆ ಅನಾಥರೆಂಬ ಅಸಹಾಯಕತೆ, ಅದಕ್ಕೆ ಉತ್ತರವ ನೀಡಲು ಯಾವ ದನಿಯು ಇಲ್ಲ. ಹೀಗೆ ಕಂಡ ಕಾಣುತ್ತಿದ್ದಂತೆ, ವಾಹನಗಳ ದಟ್ಟನೆಯ ನಡುವೆ ಸುಳಿದು ಹತ್ತಿರ ಇರುವ ಆಟಿಕೆಗಳನ್ನು ಮಾರಾಟ ಮಾಡುತ್ತ ಅತ್ತಿತ್ತ ಸುಳಿವ ಆ ಪುಟ್ಟ ಪಾದಗಳು, ಕಾರುಗಳ ಒಳಗೆ ಕುಳಿತ ಮಕ್ಕಳಿಗೆ ತಮ್ಮ ಆಟಿಕೆ ತೋರಿಸಿ ಹೇಗಾದರೂ ಇಂದಿನ ವ್ಯಾಪಾರದ ಆರಂಭ ಮಾಡಲು ಹವಣಿಸುವರು!

ಹೀಗೆ ನಿನ್ನೆ ನಾನು ಕಂಡ ಒಂದು ದೃಶ್ಯದ ತುಣುಕು ನನ್ನ ಕಣ್ಣ ಮುಂದೆ ಸುಳಿಯಿತು, ಪುಟ್ಟ ಹುಡುಗ ಸುಮಾರು ೭ - ೮  ವರ್ಷದವನಿರಬಹುದು. ಒಂದು ಕಾರಿನ ಬಳಿ ಬಂದು ತನ್ನ ಬಳಿ ಇದ್ದ ಚೀಲದಿಂದ ಆಟಿಕೆ ತೆಗದುಕೊಳ್ಳಿರೆಂದು ಗೊಗೆರದ, ಆದರೆ ಆ ಪುಣ್ಯಾತ್ಮ ಬೇಕು ಬೇಡ ಏನು ಹೇಳದೆ ಕಿಟಕಿಯ ಗಾಜು ಮುಚ್ಚಿದ, ಆ ಹುಡುಗನ ದುರದೃಷ್ಟವೇನೋ ಅವನ ಚೀಲ ಆ ಕಾರಿನ ಅಂಚನ್ನು ಉಜ್ಜಿಕೊಂಡು ಹೋಯಿತು, ಆ ವ್ಯಕ್ತಿ ಕಾರಿನಿಂದ ಇಳಿದು ಆ ಹುಡುಗನನ್ನು ಚೆನ್ನಾಗಿ ತಳಿಸಿದ, ನಿಜ ಹೇಳಬೇಕಂದೆರೆ ಆ ಚೀಲದಿಂದ ಕಾರಿಗೆ ಯಾವುದೇ ಹಾನಿಯಾಗಿರಲಿಲ್ಲ.

ಅಲ್ಲಿದ ಜನರೆಲ್ಲಾ ಆ ದೃಶ್ಯವನ್ನು ನೋಡುವ ಮೂಕ ಪ್ರೇಕ್ಷಕರಾಗಿದ್ದರು, ಅವನ ತಪ್ಪೇ ಇಲ್ಲದೆ ಅಷ್ಟು ಏಟನು ತಿಂದ ಆ ಮುಗ್ದ ಹೃದಯ ಅದೆಷ್ಟು ವೇದನೆ ಅನುಭವಿಸಿರಬಹುದು? ಆತನ ಜೊತೆ ಇದ್ದ ಹೆಂಡತಿ ಬಿಸಿಲಲ್ಲಿ ಬಂದರೆ ಎಲ್ಲಿ ಕರಗುವೇನೋ ಎನ್ನುವ ರೀತಿಯಲ್ಲಿ ಕಾರಿಗೆ ವಾಪಾಸಾದಳು, ಆ ಹುಡುಗ ಆತನ ಕೆಟ್ಟ ಬೈಗುಳ ಕೇಳಿ ಕೂಡ ತಾನು ಕೆಟ್ಟದಾಗಿ ವರ್ತಿಸಲಿಲ್ಲ, ಅಲ್ಲೇ ತನ್ನ ಸಹಚರನೊಬ್ಬ ಕೈವಸ್ತ್ರಗಳ ಮಾರುತ್ತಿದ್ದ, ಸೀಟಿ ಹೊಡೆದು ಅವನಿಗೆ ಕೈ ಬೀಸಿದ, ಈ ಮಹರಾಯ ಈಗ ಸ್ವಲ್ಪ ಹೆದರಿದ , ಆದರೂ ಅವನ ಕೈ ಹಿಡಿದು ಕಾರಿನ ಬಳಿ ಕರೆದೊಯ್ದು ಮಾತಾಡತೊಡಗಿದ.

ಅಷ್ಟರಲ್ಲಿ ಆ ಮತ್ತೊಬ್ಬ ಹುಡುಗ ಓಡಿ ಬಂದ, ಆತನಿಗೆ ಈ ಪುಟ್ಟ ಹುಡುಗ ೧೦ ರೂ ಕೊಟ್ಟು ಕರವಸ್ತ್ರ ಕರೀದಿಸಿ ಆ ಕಾರಿನವನಿಗೆ ಕೊಟ್ಟು ಚಿಲ್ಲರೆಯನ್ನು ಕೂಡ ಕೈಲಿ ಇತ್ತು ಬೆವರನ್ನು ಒರಿಸಿಕೊಳ್ಳುವಂತೆ ಹೇಳಿ ನಡೆದು ಹೋದ.

ನಿಜಕ್ಕೂ ಆ ಹುಡುಗ ನನ್ನ ನೆನಪಿನಲ್ಲಿ ಉಳಿದು ಹೋದ, ಎಷ್ಟೇ ಒಳ್ಳೆಯವರಾದರು ಒಮ್ಮೊಮ್ಮೆ ನಮ್ಮ ಕೋಪವ ನಾವು ಸ್ತಿಮಿತದಲ್ಲಿ ಇಡಲು ಕಷ್ಟವಾಗುತ್ತದೆ, ಆದರೆ ಆ ಪುಟ್ಟ ಹುಡುಗನ ವ್ಯಕ್ತಿತ್ವ ನನಗೆ ತಾಳ್ಮೆಯ ಪಾಠ ಕಲಿಸಿತು. ನನ್ನ ಈ "ಬ್ಲಾಗ್" ಆ ಹುಡುಗನಿಗಾಗಿ. ಆ ಪುಟ್ಟ ಪಾಠವ ಕೊನೆಯವರೆಗೂ ನೆನಪಲ್ಲಿ ಕೂಡಿಡುವೆ.

ಧನ್ಯವಾದಗಳು ನಿನಗೆ,  ವಿಶಾಲ ಹೃದಯದ ಪುಟ್ಟ ಹುಡುಗ !!!!
Creative Commons Licence
This work is licensed under a Creative Commons Attribution-ShareAlike 3.0 Unported License.