ಎಲ್ಲರಿಗೂ ಈ ಗಾದೆ ನೆನಪಿರಬೇಕು ಅಂದು ಬಸ್ ನಲ್ಲಿ ಪಯಣಿಸುತ್ತಾ ನನಗೆ ಆ ಗಾದೆಯ ನೆನಪಾಯಿತು
"ದೇಶ ಸುತ್ತಬೇಕು ಕೋಶ ಓದಬೇಕು " ಖಂಡಿತ ಈ ಮಾತು ಸತ್ಯ. ಅಂದು ಆಫೀಸ್ ಇಂದ ಬೇಗ ಹೊರಟಿದ್ದರಿಂದ ಬಸ್ ನಲ್ಲಿ ಪಯಣಿಸುತ್ತಿದ್ದೆ.
ನಾನು ಪಯಣಿಸುತ್ತಿದ್ದ ಆ ಬಸ್ BMTC ಯ ಕೊಡುಗೆ ಈ ಬೆಂಗಳೂರಿಗೆ, ಅದುವೇ ವಜ್ರ, ಅಥವಾ Volvo. ಬಸ್ ಪ್ರತಿ ಹಂತವನ್ನು ದಾಟಿ ಮುನ್ನಡೆಯುತಿತ್ತು , ಜೀವನದ ಪ್ರತಿ ಹೆಜ್ಜೆಯನ್ನು ನಾನು ಹೀಗೆ ಹಂತ ಹಂತವಾಗಿ ಸಾಗಬೇಕು ಎಂದು ಹೇಳಿದಂತಿತ್ತು .
ಕೋರಮಂಗಲ ಬಳಿ ಬಸ್ ಬಂದಾಗ ವೃದ್ದ ದಂಪತಿಗಳು ಏರಿದರು, ಕನ್ನಡ ಭಾಷೆ ತಿಳಿಯದ ಅವರು ಬಸ್ಸಿನ ಚಾಲಕನನ್ನು ಇದು ಬನಶಂಕರಿ ಹೋಗುತ್ತದ್ದಾ ಎಂದು ಕೇಳಿದಾಗ ಆತ ಹೌದು ಎಂದು ಹೇಳಿ ಹತ್ತಿಸಿಕೊಂಡರು.
ಬಸ್ ಹತ್ತಿದ ಮೇಲೆ ಇದರಲ್ಲಿ ಟಿಕೆಟ್ ನ ಬೆಲೆ ಹೆಚ್ಚಿರಬಹುದೆಂದು ಅನುಮಾನಿಸಿ ಚಾಲಕನನ್ನು ಕೇಳಿದಾಗ ಆತ ಏನು ಉತ್ತರ ನೀಡದೆ ಒಳಗೆ ಹೋಗಲು ಸೂಚನೆ ನೀಡಿದ. ಅಲ್ಲಿದ ಕೆಲ ಹುಡುಗಿಯರು ಅವರಿಗೆ ತಮ್ಮ ಜಾಗವನ್ನು ಬಿಟ್ಟುಕೊಟ್ಟರು. ಟಿಕೆಟ್ ನೀಡಲು ಬಂದ ಕಂಡೆಕ್ಟರ್ ಅವರ ಬಳಿ ಇದ್ದ 30ರೂ ನೋಡಿ ಜೋರಾಗಿ ಎಲ್ಲರ ಮುಂದೆ ಈ ದುಡ್ಡಲ್ಲಿ ಇಲ್ಲಿ ಯಾವ ಟಿಕೆಟ್ ಸಿಗಲ್ಲ ಮೊದಲು ಈ ಬಸ್ ಇಂದ ಇಳೀರಿ ಎಂದು ಜೋರಾಗಿ ಮಾತಾಡಿದರು.
ಅದನ್ನು ಕೇಳಿದೊಡನೆ ಅವರಿಗೆ ಭಯವಾಗಿ ಆ ವೃದ್ದ ದಂಪತಿಗಳು ಬಸ್ ನ ಮುಂದಿನ ಬಾಗಿಲ ಬಳಿ ಬಂದರು, ಆಗ ಚಾಲಕ ನಾನು ಮೊದಲೇ ಹೇಳಲಿಲ್ಲವೇ ಈ ಬಸ್ ನಿಮಗಲ್ಲ ಎಂದರು. ಆ ದಂಪತಿಗಳು ಸುಮ್ಮನೆ ನಕ್ಕರು. ಆ ನಗು ಆ ಭಾಷೆ ತಿಳಿಯದ ಕಾರಣ ಬಂದಿರಬಹುದು ಆದರೆ ಅಷ್ಟೆಲ್ಲಾ ಬೈಗುಳ ಕೇಳಿದ ಮೇಲು ಅವರಲ್ಲಿ ಇದ್ದ ಆ ತಾಳ್ಮೆ ನಂಗೆ ಆಶ್ಚರ್ಯ ಉಂಟುಮಾಡಿತು. ಆಗ ಮುಂದೆ ಅಲ್ಲೇ ಇದ್ದ ತಿರುವಿನ ಬಳಿ ಬಸ್ ನಿಂತಿತು. ಆಗ ಆ ತಾತನ ಕೈ ಬಸ್ ನ ಹಿಡಿಗಳ ಮದ್ಯೆ ಸಿಕ್ಕಿಕೊಂಡಿತು. ಎಲ್ಲೊ ಅಡಗಿದ್ದ ಕೋಪ ನಾನು ಜೋರಾಗಿ ಕೂಗುವಂತೆ ಮಾಡಿತು,ಅವರ ಕೈ ನೋಡಿಕೊಂಡು ಬಾಗಿಲು ತೆರಿಯಿರಿ ಎಂದು ಜೋರಾಗಿ ಆ ಚಾಲಕನಿಗೆ ಹೇಳಿದೆ, ಆತನ ಉತ್ತರ ಮಾತ್ರ ತೇಲಿಸುವಂತೆ ಇತ್ತು, ಬಾಗಿಲ ಬಳಿ ಇರುವವರು ನೋಡಿ ಇಲಿಯಬೇಕೆ ವಿನಃ ನಾನು ಕಾರಣನಲ್ಲ ಎಂದು, ಆತನ ನೆರವಿಗೆ ಬಂದ ಕಂಡೆಕ್ಟರ್ ಕೂಡ ದಿನ ನಮಗೆ ಇದು ಮಾಮೂಲು, ಬೇಗ ಬೇಗ ಇಳಿಯಿರಿ ಎಂದಳು.
ನಾನು ಅಷ್ಟು ಜೋರಾಗಿ ಮಾತಾಡಲು ಕಾರಣ ಅವರು ಬಸ್ ನಿಲ್ಲಿಸಿದ್ದ ಜಾಗ, ಅದು ಬಸ್ ನಿಲ್ಲುವ ಸ್ಥಳವಲ್ಲ
,ಆ ದಂಪತಿಗಳಿಗೆ ಆ ಜಾಗದ ಪರಿಚಯವಿಲ್ಲ, ಹಾಗು ಕೂಡ ಅಲ್ಲಿ ಅವರನ್ನು ನಿರ್ದಾಕ್ಷಿಣ್ಯವಾಗಿ ಕೆಳಗೆ ಇಳಿಸಿದರು ಅದು ಮಾನವತೆಯ ಅಳಿಸಿದಂತೆ ಆಗಿತ್ತು. ನಾನು ಮುಂದಿನ ನಿಲ್ದಾಣದಲ್ಲಿ ಇಳಿಸಬಾರದೆ ಎಂದು ಕೇಳಿದ್ದಕ್ಕೆ ಅದು ಮುಂದಿನ ಹಂತ ಬೇಕಿದ್ದರೆ ನೀವೇ 20ರೂ ಕೊಟ್ಟು ಅವರಿಗೆ ಚೀಟಿ ಕರೀದಿಸಿ ಎಂದರು. ನಾನು ಏನು ಮಾಡಬೇಕು ಎಂದು ಯೋಚಿಸುವುದರ ಒಳಗೆ ಆ ವೃದ್ದರು ಬಸ್ ಇಳಿದು ಕೊಂಚ ಮುಂದೆ ನಡೆಯುತ್ತಿದ್ದರು, ಆಗ ಬಸ್ ತನ್ನ ಕದವನ್ನು ಮುಚ್ಚಿ ಕೊಂಡು ಆ ದಂಪತಿಯ ಮುಂದೆ ಸಾಗಿತು ಅವರು ನನ್ನನ್ನು
ನೋಡಿದಾಗ ಆ ನೋಟ ನಾನು ಎದುರಿಸಲಾದೆ. ಅಂದು ನಾನು ಮಾಡಿದ್ದೂ ತಪ್ಪು ಎಂಬ ನೋವು ಇಂದಿಗೂ ಕಾಡುತ್ತಿದ್ದೆ. ಮನಸು ಅಂದು ನನ್ನ ಬುದ್ದಿಯ ಜೊತೆ ಕದನ ಮಾಡುತ್ತಿತ್ತು. ದಾರಿಯಲ್ಲಿ ನಾನು ಎಲ್ಲೋ ಸೋತುಹೋದಂತೆ ಭಾಸವಾಯಿತು.
ನಮ್ಮ ಸಂಸ್ಕೃತಿ ಹಿರಿಯರ ಗೌರವಿಸುವುದು ಆದರೆ ಆ ಸಂಸ್ಕಾರ ಅಲ್ಲಿ ಯಾರಲ್ಲೂ ಉಳಿಯದೆ ಹೋಯಿತು. ಆ ಕ್ಷಣ ನನ್ನ ಮನಸಿಗೆ ಬಂದದ್ದು ಇನ್ನು ಮುಂದೆ ಎಂದಾದರೂ ನಾನು ಈ ರೀತಿ ಪರೀಕ್ಷೆಗೆ ಒಳಗಾದರೆ ನಾನು ಯಾವುದೇ ವಿಧದಲ್ಲೂ ಯೋಚಿಸದೆ ಮನಸಿನ ಮಾತಿಗೆ ಓಗೊಡುವೆ.