ನೀ ಹೀಗೆ ಮೌನಿಯಾದರೆ,
ಆಗಸದಿ ಮೋಡ ರವಿಯ ಮುಸುಕಿದಂತೆ !
ನೀ ಹೀಗೆ ಮುನಿದರೆ,
ಮನದಲ್ಲಿ ಭಾವನೆ ಹುದುಗಿಹೋದಂತೆ !
ನೀ ನಿನ್ನಲ್ಲೇ ಕಳೆದುಹೋದರೆ,
ನಾ ನಿನ್ನಿಂದ ದೂರಾದಂತೆ !
ಲೋಕದ ಪ್ರತಿ ಭಾಷೆಗೆ ತನ್ನದೇ ಪದಗಳು
ಆದರೆ ನೀ ಉಲಿಯದ ಮಾತಿಗಿದೆ ಹೊಸ ಅರ್ಥಗಳು
ದೂರ ಉಳಿದೆ ಹೊಸ ಬೇಲಿಯನೇರಿಸಿ
ಮಾತಿರದ ಬಂಧನದ ಸೆರೆಮನೆಗೆ ನನ್ನ ಸೇರಿಸಿ
ನಿನ್ನ ನಗೆಯ ತೋರಣ ನನ್ನ ಮನದ ದ್ವಾರಕ್ಕಿರಲಿ
ನಿನ್ನ ಮಾತಿನ ಒಗ್ಗರಣೆ ನನ್ನ ಬದುಕಿನ ಸಾರವಾಗಿರಲಿ
ನಿನ್ನ ಪ್ರತಿ ಹೆಜ್ಜೆ ನನ್ನ ನಡೆಸುವ ಧೈರ್ಯವಾಗಿರಲಿ
ನಿನ್ನ ಎಲ್ಲಾ ನೋವು ನನ್ನ ಪಾಲಿನದಾಗಲಿ
ಕಳೆದು ಹೋಗದಿರು ನಿನ್ನದೇ ಲೋಕದಲಿ
ನನ್ನ ನೆರಳನು ಹುಡುಕುತಿರು ನಿನ್ನ ನಡಿಗೆಯಲಿ
ಪ್ರೇಮದ ಕಡಲಿನಲಿ ನಮ್ಮ ಪಯಣವಿರಲಿ
ಆ ಪಯಣದ ಅಂತ್ಯ ಎಂದಿಗೂ ಆಗದಿರಲಿ