ಅದೆಷ್ಟೋ ದಿನದ ನಂತರ ಆ ಚಂದಿರನ ದರ್ಶನ, ಆ ತಣ್ಣನೆ ಬೆಳದಿಂಗಳು ನಮ್ಮೂರ "ಚಂದಮಾಮ" ನ ನೆನಪು ತಂದಿತು. ಆ ತಿಳಿ ಆಕಾಶ ಬೆಳ್ಳನೆ ಮೋಡ.. ತಂಪು ತಂಗಾಳಿ ಎಲ್ಲಾ ಮೈಮರಿಸಿತ್ತು.
ಅದೊಂದು ದಿನ "ನಮ್ಮೂರು ಚಂದವೋ ನಿಮ್ಮೂರು ಚಂದವೋ" ಹಾಡು ಆಕಾಶವಾಣಿ ಯಲ್ಲಿ ಮೂಡಿಬರುತಿತ್ತು. ಹಾಡಲ್ಲಿ ಏನಿದೆ? ದಿನ ಅದೇ ಹಾಡು, ಅದೇ TV, ಅದೇ traffic, ಅದೇ ಗಾಡಿ ಹಾಗು ಅದೇ bus, ದಿನಕ್ಕೊಮ್ಮೆ ಅಲ್ಲಲ್ಲಿ ಟ್ರಾಫಿಕ್ ನ ಕಾಟ..ಆದರೇನು ಆ office ಕ್ಯಾಬ್ ನಲ್ಲಿ ಎಲ್ಲರ ಜೊತೆ ಹಾಡೋ ಹಾಡು, ಮಾಡೋ ತರಲೇ ಆ ದಿನದ ಮುನ್ನುಡಿಯಾಗುತ್ತಿತ್ತು.
ಕೆಲಸದಲ್ಲಿ ಏನಾದರೂ ಹೊಸತು ಬೇಕು, ಹೊರ ದೇಶಕ್ಕೆ ಹೋಗಿ ಸುತ್ತಾಡಬೇಕು ಅನಿಸಿದ್ದು ನಿಜ, ಆದರೆ ಬಯಸಿದ ಅವಕಾಶ ಸರಿಯಾದ ಸಮಯಕ್ಕೆ ಸಿಗುವುದೋ ಇಲ್ಲವೋ ಅನಿಸಿದಾಗ ಹಾರಿದ್ದು "ಕಾಂಗರೂ ನಾಡು"
ಹಾಂ! ಈ ಊರಿನಲ್ಲಿ ಚಂದಿರನ ಬಗ್ಗೆ ಏಕೆ ಬರೆದಿದ್ದು ಅಂತೀರಾ? ಇಲ್ಲಿ ರಾತ್ರಿಗಳನ್ನು ನೋಡಿದ್ದು ಬಹಳ ಕಡಿಮೆ. Long days shorter nights ಇಲ್ಲಿ. ಸುಮಾರು ರಾತ್ರಿ ೯. ೪೦ ರ ಸುಮಾರಿಗೆ ಸೂರ್ಯ ಅಸ್ತಮಾನ, ಆ ಬೆಳಕಿನ ನಡುವೆ ಕಳೆದು ಹೋಗುತ್ತಿದ್ದ ನಮ್ಮ ಚಂದಮಾಮ. ಮೊದಲಲ್ಲಿ ಕಂಡ ಆ ಚಳಿಗಾಲ ಜೀವನದಲ್ಲಿ ಎಂದೂ ಕಂಡಿರದಂತಹುದು ಹಾಗೂ ಅನುಭವಿಸಲಾಗದಂತದು. ದುಗುಡತೆಯ ಹೆಚ್ಚಿಸುವುದು ಆ ಚಳಿ.
ಆಸ್ಟ್ರೇಲಿಯಾ ಚೆಂದದ ಊರು, ಜನ ಬಹಳ ಸರಳರು ಆದರೂ ಅಲ್ಲಲ್ಲಿ ಕಿರಿಕ್ ಗಳು ಇದಿದ್ದೆ , ಆದರೆ ಕೆಟ್ಟವರೇನು ಅಲ್ಲ. ಸುಂದರ ಪರಿಸರ, ಹಸಿರನು ತೊರೆಯದೆ, ಉಸಿರನ್ನು ಅಳಿಸದೇ ಎಲ್ಲವನ್ನು ಸಮನಾಗಿ ತೂಗಿಸಿದ್ದಾರೆ.
ಕಂಡ ಪ್ರಪಂಚ ಹೊಸತು ಹಾಗಾಗಿ ಎಲ್ಲಾ ಚೆಂದ ಚೆಂದ ಚೆಂದ !! ಆದರೆ ನಮ್ಮ ದೇಶ ನಮ್ಮ ಜನ, ನಮ್ಮ ಭಾಷೆ, ಇದನ್ನು ಬಿಟ್ಟು ಏನೋ ಕಳೆದುಕೊಂಡ ಅನುಭವ. ಎಲ್ಲಾ ಇದ್ದು ಏನೂ ಇರದ ಭಾವ. ಅಮ್ಮ ಮಾಡೋ ರುಚಿ ಅಡಿಗೆ, ಸ್ನೇಹಿತರ ಒಡನಾಟ, ಊಟದ ಸಮಯದಲ್ಲಿ ನಡಿಯೋ ವಾದ ವಿವಾದ!, ಆಗಾಗ ಗುನುಗುನಿಸೋ ಹೊಸ ಹಾಡುಗಳು, ವಾರಾಂತ್ಯದಲ್ಲಿ ನೋಡೋ ಸಿನಿಮಾ, ಆಗಾಗ ಗಾಡಿಯಲ್ಲಿ ತಿರುಗಿ traffic ನ ಬೈದು ಕೊಳ್ಳೋ ರೀತಿ, ಹಬ್ಬದ ಸಂಭ್ರಮ, ಆ ರಂಗೋಲಿಯ ರಂಗು, ಆ ತೋರಣಗಳ ಹಸಿರು,ನಮ್ಮವರ ಹಿತವಚನ ಅದೇ ನಮ್ಮ ಜೀವನ, ಈ ಹೊಸತೇನೇ ಇದ್ದರೂ ಕೆಲ ದಿನಗಳ ಸಂತಸ ವಿನಃ ಅದೇ ನಮ್ಮ ಜೀವನದ ಶಾಶ್ವತ ಗುರಿ ಅಲ್ಲ. ಇದು ಕೇವಲ ನೆರಳು ಬೆಳಕಿನ ಪಯಣ.
"ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು" ಈ ಭಾವಗೀತೆಯ ಸಾರಾಂಶ ಸತ್ಯವೇ ಸರಿ.
ನಮ್ಮ ದೇಶ ನಮ್ಮದು, ನಮ್ಮ ನುಡಿ ನಮ್ಮದು, ಆ ಮಣ್ಣಿನ ಗುಣ ನಮ್ಮನ್ನು ಅಲ್ಲಿಗೆ ಪುನಃ ಕರೆವ ಶಕ್ತಿ ಹೊಂದಿದೆ. ಆ ಶಕ್ತಿಗೆ ಆ ರಕ್ಷೆಗೆ ನಮನ. ಸಾಗೋ ಪ್ರತಿ ಹಾದಿಯಲ್ಲೂ ನಮಗೆ ನಮ್ಮತನದ ಹುಡುಕಾಟ, ಪ್ರೀತಿ ಕರುಣೆಯ ತವಕ. ಆದರೆ ಅದಕ್ಕೆ ಏನೂ ಕೊರತೆ ಇಲ್ಲ. ಕೊರತೆ ಮನದ ಸೋಲು, ಆ ಸೋಲಿಗೆ ತವಕಿಸದೆ, ಸಾಗಿ ಹಾದಿಯ ಮೀರಿ ಗುರಿಯ ಮುಟ್ಟಿ ಮರಳಲು ಅಷ್ಟೇ ಮನದ ತುಡಿತ.