ಹಾದಿಯಲಿ ಮುಗಿಯದ ಪಯಣ
ಕರಿ ಮೋಡದ ಒಳಗೆ ಬೆಳಗಿಲ್ಲದ ಯಾನ
ಸ್ಪೂರ್ತಿ ಇಲ್ಲದ ಜೀವನಕೆ
ಮರಿಚಿಕೆಯಾದ ನಲಿವು
ಸ್ವಪ್ನ ಲೋಕದಲ್ಲಿ ಹಾರುತ್ತಿದ್ದ ಮನದ ಗಾಳಿಪಟ
ಕಳೆದು ಕೊಂಡಿತು ಏಕೋ ಹಾರುವ ತನ್ನ ಹಠ
ಸ್ನೇಹ ಪ್ರೇಮವಿರದ ಖಾಲಿ ಲೋಕದಲ್ಲಿ
ಬಂಧವ ಬಯಸುವ ಈ ಚಟ
ಕೈಗೆ ಸಿಗುತ್ತಿಲ್ಲ ಆಸರೆ, ಬಣ್ಣವಿಲ್ಲದ ಲೋಕವಾಗಿದೆ ಈ ಧರೆ
ಖಾಲಿ ಖಾಲಿಯಾಗಿದೆ ಮನದ ಕವಿತೆ, ಆದರೂ ನುಡಿಯುತಿದೆ ಪದಗಳ ಕಂತೆ
ಈ ಅಕ್ಷರಗಳ ಮಾಲೆ, ಹೇಳಬಲ್ಲದೆ ಭಾವನೆಗಳ ಸರಮಾಲೆ
ಸ್ವರಗಳು ಬಿಡಿಸಬಲ್ಲದೇ ಅಂತರಂಗದ ಬಲೆ
ಬೇಕಿದೆ ಬಿಡುಗಡೆಯ ದಾರಿ, ಹರಿದು ಬಿಡಬೇಕಿದೆ ನೋವಿನ ಸೆಲೆ
ನಗುವ ತರಬೇಕಿದೆ ತುಟಿಗಳಿಗೆ, ನಿರ್ಮಲ ಸ್ಪರ್ಶ ನೀಡಬೇಕಿದೆ ಮನಕೆ
ಅಲೆಗಳ, ತರಂಗಳ ತೊಳಲಾಟ ಹರಿಸಿ, ನೆಮ್ಮದಿಯ ನಗು ಹರಿಸಬೇಕಿದೆ
ಪಡೆಯಬೇಕಿದೆ ಮರಳಿ ಕೊಂಚ ಮುಗ್ಧ ಜೀವನದ ನೆನಪುಗಳು